ಬೆಂಗಳೂರಿನಲ್ಲಿ ಕೊವಿಡ್-19 ಗುಣಮುಖವಾಗಲು ಮನೆಯಲ್ಲೇ ಚಿಕಿತ್ಸೆ!
ಬೆಂಗಳೂರು, ಅಕ್ಟೋಬರ್.06: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ನಿಮ್ಮ ಆರೋಗ್ಯ ತಪಾಸಣೆ ನಡೆಸುವುದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಕೊವಿಡ್-19 ಸೋಂಕಿನ ಮತ್ತು ಸೋಂಕಿತರ ಬಗ್ಗೆ ಸಮೀಕ್ಷೆ ನಡೆಸುವುದು ಮತ್ತು ಆರೋಗ್ಯ ತಪಾಸಣೆ ಬಗ್ಗೆ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.
ಪೂರ್ವ ವಲಯದ ಕೊವಿಡ್-19 ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಕೊವಿಡ್-19 ನಿಯಂತ್ರಣಕ್ಕೆ ಬಳಸುವ ಉಪಕರಣಗಳ ಸಂಗ್ರಹಣ ಎಷ್ಟರ ಮಟ್ಟಿಗಿದೆ. ಸೋಂಕಿತರ ಹುಡುಕಾಟ ಪ್ರಕ್ರಿಯೆ ಹೇಗಿದೆ. ಹೋಮ್ ಐಸೋಲೇಷನ್ ನಲ್ಲಿರುವವರ ಆರೋಗ್ಯದ ಉಸ್ತುವಾರಿ ಮತ್ತು ಹಾಸಿಗೆಗಳ ವ್ಯವಸ್ಥೆಯನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಪರಾಮರ್ಶೆ ನಡೆಸಿದರು.

ಹೇಗಿದ್ದಾರೋ ಹೋಮ್ ಐಸೋಲೇಷನ್ ಸೋಂಕಿತರು?
ಹೋಮ್ ಐಸೋಲೇಷನ್ ನಲ್ಲಿ ಸಾಕಷ್ಟು ಮಂದಿ ಕೊರೊನಾವೈರಸ್ ಸೋಂಕಿತರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಹೋಮ್ ಐಸೋಲೇಷನ್ ನಲ್ಲಿರುವ ಕೊವಿಡ್-19 ಸೋಂಕಿತರ ಆರೋಗ್ಯ ಸ್ಥಿತಿ ಹೇಗೆ, ಸರ್ಕಾರ ನೀಡಿರುವ ಸೌಲಭ್ಯಗಳಿಂದ ಆರೋಗ್ಯದಲ್ಲಿ ಚೇತರಿಕೆಯಾಗಿದೆಯೇ, ಅವರು ಸಂತುಷ್ಠರಾಗಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಹೋಮ್ ಐಸೋಲೇಷನ್ ನಲ್ಲಿದ್ದರೇನು ಸೌಲಭ್ಯ?
ಕೊರೊನಾವೈರಸ್ ಸೋಂಕಿನ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿದ್ದು, ಸೌಮ್ಯ ಪ್ರಮಾಣದ ಸೋಂಕಿತರನ್ನು ಹೋಮ್ ಐಸೋಲೇಷನ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅಂಥ ಸೋಂಕಿತರಿಗೆ ನೀಡುವ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಸರ್ಕಾರದ ಕಡೆಯಿಂದ ಸರಿಯಾಗಿ ತಲುಪಿಸಲಾಗುತ್ತಿದೆಯೇ ಇಲ್ಲವೇ ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಕೊವಿಡ್-19 ಸೋಂಕಿಗೆ ಮನೆಯಲ್ಲೇ ಚಿಕಿತ್ಸೆ
ಕೊರೊನಾವೈರಸ್ ಸೋಂಕಿತರಿಗೆ ಸೌಮ್ಯ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಂತಾ ಸಂದರ್ಭಗಳಲ್ಲಿ ಹೋಮ್ ಐಸೋಲೇಷನ್ ನಲ್ಲಿರಿಸಿಯೇ ಚಿಕಿತ್ಸೆ ನೀಡಬಹುದು. ಸೂಕ್ತ ಸಂದರ್ಭದಲ್ಲಿ ನೀಡುವ ಚಿಕಿತ್ಸೆಯಿಂದ ಸೋಂಕಿತರು ಮನೆಗಳಲ್ಲೇ ಗುಣಮುಖರಾದ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಹೋಮ್ ಐಸೋಲೇಷನ್ ನಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯ ಸೌಲಭ್ಯವನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಈ ಸೌಲಭ್ಯಗಳು ನಿಜವಾಗಿಯೂ ಜನರಿಗೆ ತಲುಪುತ್ತಿವೆಯೇ ಇಲ್ಲವೇ ಎನ್ನುವುದನ್ನು ಪರಾಮರ್ಶೆ ಮಾಡಬೇಕಿದೆ. ಹೀಗಾಗಿ ಮನೆ ಮನೆ ಸಮೀಕ್ಷೆ ಮೂಲಕ ಕೊವಿಡ್-19 ಸೋಂಕಿತರ ಪತ್ತೆ ಮತ್ತು ಹೋಮ್ ಐಸೋಲೇಷನ್ ನಲ್ಲಿರುವವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಪೂರ್ವ ವಲಯದ 2968 ಸೋಂಕಿತರು 10 ದಿನಗಳಲ್ಲೇ ಗುಮುಖ
ಬೆಂಗಳೂರು ಪೂರ್ವ ವಿಭಾಗದ ಕೊರೊನಾವೈರಸ್ ಸೋಂಕಿತ ಅಂಕಿ-ಅಂಶಗಳನ್ನು ಗಮನಿಸಿದಾಗ ಕಳೆದ 10 ದಿನಗಳಲ್ಲಿ 5866 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 1771 ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆದರೆ 2968 ಸೋಂಕಿತರ ಆರೋಗ್ಯದಲ್ಲಿ ಹೋಮ್ ಐಸೋಲೇಷನ್ ನಲ್ಲಿಸಿ ನೀಡಿದ ಚಿಕಿತ್ಸೆಯಿಂದಲೇ ಸುಧಾರಣೆ ಕಂಡು ಬಂದಿದೆ.

ಐಸೋಲೇಷನ್ ನಲ್ಲಿರುವ ರೋಗಿಗಳ ಪರಿಶೀಲನೆ
ಪೂರ್ವ ವಲಯದಲ್ಲಿ ಅಧಿಕಾರಿಗಳು ಹೋಮ್ ಐಸೋಲೇಷನ್ ನಲ್ಲಿರುವವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸೋಂಕಿತರಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಸರ್ಕಾರಿ ಸೌಲಭ್ಯಗಳು ತಲುಪುತ್ತಿವೆಯೇ. ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾದ ಕೋಣೆ ವ್ಯವಸ್ಥೆಯಿದೆಯೇ. ಸೋಂಕಿತನು ಪ್ರತ್ಯೇಕವಾಗಿ ಶೌಚಾಲಯವನ್ನು ಬಳಸುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ. ಸೋಂಕಿತರಿಗೆ ಅಗತ್ಯವಿರುವ ಸೌಲಭ್ಯಗಳ ಕೊರತೆ ಕಂಡು ಬಂದಲ್ಲಿ ಅಂಥವರನ್ನು ಕೊವಿಡ್-19 ಆರೈಕೆ ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications