ಅಬ್ಬಬ್ಬಾ.. ಎಂತೆಂಥಾ ಭಯಾನಕ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ!
ಇದು ಕೊರೊನಾ ವೈರಸ್ ಸಮಸ್ಯೆಯಲ್ಲ ಅಥವಾ ಇದು ಇಂದು ನಿನ್ನೆಯ ತಲೆನೋವಲ್ಲ. ಸಾಮಾಜಿಕ ತಾಣದ ಪ್ರಭಾವಕ್ಕೆ ಸಮಾಜ ಎಷ್ಟು ಒಳಗಾಗುತ್ತಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ನಮ್ಮ ನಡುವೆ ಸಿಗುತ್ತಾ ಹೋಗುತ್ತವೆ.
ಯಾವುದೇ ಬಹುಚರ್ಚಿತ ವಿಷಯಗಳ ಕುರಿತು ಸಾಮಾಜಿಕ ತಾಣದಲ್ಲಿ ಎಷ್ಟು ಉಪಯುಕ್ತ ಮಾಹಿತಿಗಳು ಹರಿದಾಡುತ್ತವೋ, ಅಷ್ಟೇ, ಸುಳ್ಳುಸುದ್ದಿಗಳು ದಿನದಿಂದ ದಿನಕ್ಕೆ ಮೇಲುಗೈ ಸಾಧಿಸುತ್ತಾ ಹೋಗುತ್ತಿವೆ.
ಇನ್ ಬಾಕ್ಸಿಗೆ ಬರುವ ಯಾವುದೇ ಮಾಹಿತಿಗಳನ್ನು ಅದರ ಪೂರ್ವಾಪರ ಯೋಚಿಸದೇ ಫಾರ್ವರ್ಡ್ ಮಾಡುತ್ತಾ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೇ ಇರುವುದರಿಂದ, ಸೂಕ್ಷ್ಮ ವಿಚಾರಗಳು ಇನ್ನಷ್ಟು ಕಗ್ಗಂಟಾಗುತ್ತಾ ಸಾಗುತ್ತಿವೆ.
ಉತ್ತ,ಮ ಸಮಾಜಕಟ್ಟಲು ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಹೊತ್ತಿನಲ್ಲಿ ಸುಳ್ಳು, ಕಪೋಕಲ್ಪಿತ ಸುದ್ದಿಗಳಿಗೆ ಓಗುಡುತ್ತಾ, ಪರಿಸ್ಥಿತಿಯನ್ನು ನಿಭಾಯಿಸಲು ಹೊರಟವರಿಗೆ ಇನ್ನಷ್ಟು ಕಿರಿಕಿರಿಯನ್ನುಂಟು ಮಾಡುತ್ತಿವೆ. ಕೊರೊನಾ ವಿಚಾರದಲ್ಲಿ ಎಂತೆಂಥಾ ಸುಳ್ಳುಸುದ್ದಿಗಳು ಹರಿದಾಡುತ್ತಿವೆ, ಎನ್ನುವುದಕ್ಕೆ ಕೆಲವೊಂದು ಸ್ಯಾಂಪಲ್ ಗಳು:

ವಿಶೇಷ ಮಿಲಿಟರಿ ಹೆಲಿಕಾಪ್ಟರ್‌ಗಳು
ಇಂದು ವಿಶೇಷ ಮಿಲಿಟರಿ ಹೆಲಿಕಾಪ್ಟರ್‌ಗಳು ದೇಶಾದ್ಯಂತ ಆಕಾಶದಲ್ಲಿ ಕೂರೊನಾ ವೈರಸ್ ವಿರುದ್ಧ ಕೀಟನಾಶಕಗಳನ್ನು ಸಿಂಪಡಿಸುತ್ತವೆ, ಆದ್ದರಿಂದ ನೀವು ರಾತ್ರಿ ಹನ್ನೆರಡು ಗಂಟೆಯ ನಂತರ ಮನೆಯೊಳಗೆ ಇರಬೇಕು ಮತ್ತು ರಾತ್ರಿಯಲ್ಲಿ ವಿಮಾನಗಳ ಶಬ್ದಗಳನ್ನು ಕೇಳಿದಾಗ ಹೊರಗಿನಿಂದ ಎಲ್ಲಾ ಬಟ್ಟೆಗಳನ್ನು ತೆಗೆಯಬೇಕು. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಿ..

ಬಿಬಿಎಂಪಿ, ಕೊರೊನಾ ವೈರಸ್ ನಾಶ ಪಡಿಸಲು ಮೆಡಿಸಿನ್ ಸಿಂಪಡಿಸುತ್ತದೆ
ಎಲ್ಲಾ ಬೆಂಗಳೂರಿಗರೇ, ಇಂದು ರಾತ್ರಿ ಮನೆಯಿಂದ ಹೊರಗೆ ಬರಬೇಡಿ. ಇಂದು ರಾತ್ರಿ ಹತ್ತು ಗಂಟೆಯಿಂದ ನಾಳೆ ಬೆಳಗ್ಗೆ ಐದು ಗಂಟೆಯವರೆಗೆ ಬಿಬಿಎಂಪಿ, ಕೊರೊನಾ ವೈರಸ್ ನಾಶ ಪಡಿಸಲು ಮೆಡಿಸಿನ್ ಸಿಂಪಡಿಸುತ್ತದೆ. ಬೆಂಗಳೂರಿನಲ್ಲಿರುವ ನಿಮ್ಮೆಲ್ಲಾ ಸ್ನೇಹಿತರಿಗೆ/ಸಂಬಂಧಿಕರಿಗೆ ಈ ವಿಷಯವನ್ನು ಹೆಚ್ಚುಹೆಚ್ಚು ತಿಳಿಸಿ.

ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಇಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ವೈರಸ್ ದೇಶದಲ್ಲಿ ಹೆಚ್ಚು ಹಬ್ಬುತ್ತಿರುವುದರಿಂದ, ಇದನ್ನು ತಡೆಗಟ್ಟಲು ಮುಂದಿನ ಆದೇಶದವರೆಗೆ ದೇಶವನ್ನು ಸಂಪೂರ್ಣ ಬಂದ್ ಮಾಡುವ ನಿರ್ಧಾರವನ್ನು ಮೋದಿ ಪ್ರಕಟಿಸಲಿದ್ದಾರೆ.

ಬೆಂಗಳೂರು ನಗರದ ಕಲಾಸಿಪಾಳ್ಯ ಮಾರುಕಟ್ಟೆ
ಬೆಂಗಳೂರು ನಗರದ ಕಲಾಸಿಪಾಳ್ಯ ಮಾರುಕಟ್ಟೆ ಮುಂದಿನ ಒಂದು ವಾರ ಸಂಪೂರ್ಣ ಬಂದ್ ಆಗಲಿದೆ. ಎಲ್ಲಾ ನಾಗರೀಕರು ಈ ಅವಧಿಗೆ ಬೇಕಾಗುವ ತರಕಾರಿ, ಹಣ್ಣು, ದಿನಸಿಗಳನ್ನು ಶೇಖರಿಸಿ ಇಟ್ಟುಕೊಂಡಿರುವುದು ಸೂಕ್ತ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ
ಕೋವಿಡ್ 19 - ಈ ತಕ್ಷಣದಿಂದಲೇ ಜಾರಿಗೆ ಬರುವಂತೆ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ತನ್ನ ಎಲ್ಲಾ ನಾಲ್ಕು ಘಟಕಗಳ ಸೇವೆಯನ್ನು ಮುಂದಿನ ಆದೇಶದವರೆಗೆ ನಿಲ್ಲಿಸಲಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ.












Click it and Unblock the Notifications