ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ: ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 24: ಕೊರೊನಾ ನಾಲ್ಕನೇ ಅಲೆ ಆರಂಭವಾಗಿದೆ, ಮುಂದಿನ ನಾಲ್ಕೈದು ವಾರಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ, ಸಾರ್ವಜನಿಕರು ಎಚ್ಚರ ತಪ್ಪಬಾರದು ಎಂದು ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಡಾ.ಮಂಜುನಾಥ್, "ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದು ಆರಂಭವಾಗಿದೆ, ವೈರಸ್ ರೂಪಾಂತರಗೊಳ್ಳುವುದು ಸಾಮಾನ್ಯ, ಆದರೆ, ಜನರು ಎಚ್ಚರಿಕೆಯಿಂದ ಇರಬೇಕು"ಎಂದು ಹೇಳಿದ್ದಾರೆ.
"ದೆಹಲಿ, ಹರ್ಯಾಣ, ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಿಲ್ಲದಿದ್ದರೂ, ಮುನ್ನೆಚ್ಚರಿಕೆಯಾಗಿ ಜನರು ಮಾಸ್ಕ್ ಧರಿಸುವುದು ಸೂಕ್ತ"ಎಂದು ಡಾ.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

"ಕೋವಿಡ್ ಎರಡನೇ ಮತ್ತು ಮೂರನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿದ್ದವೋ, ಅದೇ ರೀತಿ ನಾಲ್ಕನೇ ಅಲೆಯಲ್ಲೂ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಜನರು ಎಚ್ಚರ ತಪ್ಪಬಾರದು" ಡಾ.ಮಂಜುನಾಥ್ ಸಲಹೆಯನ್ನು ನೀಡಿದ್ದಾರೆ.
"ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಇರುವವರು, ಕ್ಯಾನ್ಸರ್ ರೋಗಿಗಳು, ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವವರು, ಅಸ್ತಮಾ ಕಾಯಿಲೆ ಇರುವವರು ಎಚ್ಚರವಾಗಿರಬೇಕು. ಈಗ ಎದುರಾಗಿರುವುದು ಹೊಸ ತಳಿಯೇನೂ ಅಲ್ಲ, ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ" ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
"ಜನರು ಮಾಸ್ಕ್ ಧರಿಸುವುದು ಅತ್ಯಂತ ಸೂಕ್ತ, ಎರಡೂ ಡೋಸ್ ಲಸಿಕೆ ಹಾಕಿಕೊಂಡಾಗಿದೆ ಎಂದು ನಿರ್ಲಕ್ಷ್ಯ ಬೇಡ. ಜ್ವರ, ಕೆಮ್ಮು, ನೆಗಡಿ ಎದುರಾದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಮುಂದಿನ ವಾರಗಳಲ್ಲಿ ನಾಲ್ಕನೇ ಅಲೆ ಎದುರಾಗಲಿದ್ದು, ನಂತರ ಸಹಜವಾಗಿ ಕ್ಷೀಣಿಸುತ್ತ ಬರುತ್ತದೆ" ಎಂದು ಡಾ.ಮಂಜುನಾಥ್ ಹೇಳಿದ್ದಾರೆ.











Click it and Unblock the Notifications