Kannada: ಕನ್ನಡ ಬಾವುಟದಲ್ಲಿ ಪಾಕಿಸ್ತಾನದ ಚಿಹ್ನೆ ಬಳಸಿದ ಫೋಟೋ ವೈರಲ್
ಕರ್ನಾಟಕದಲ್ಲಿ ಸದ್ಯ ಕನ್ನಡಕ್ಕೇ ಕಿಮ್ಮತ್ತಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಕನ್ನಡ ಕಲಿಯಿರಿ ಎನ್ನುವುದೇ ದೊಡ್ಡ ಅಭಿಯಾನದಂತಾಗಿದೆ. ಇನ್ನು ಹಲವರು ಕನ್ನಡಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಇದನ್ನು ಶೋಕಿಗಾಗಿ ಮಾಡುತ್ತಿದ್ದಾರೆ ಎನ್ನುವ ದೂರು ಕೂಡ ಇದೆ. ಆದರೆ, ಕರ್ನಾಟಕದ ವ್ಯಕ್ತಿಯೇ ಒಬ್ಬರ ಕನ್ನಡದ ಬಾವುಟಕ್ಕೆ ಅವಮಾನ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾನೆ. ಕನ್ನಡ ಬಾವುಟಕ್ಕೆ ಪಾಕಿಸ್ತಾನದ ಚಿಹ್ನೆ ಹಾಕಿ ಎಡಿಟ್ ಮಾಡಿರುವ ಫೋಟೋ ಹಂಚಿಕೊಂಡಿದ್ದಾನೆ. ಇದಕ್ಕೆ ಕನ್ನಡಿಗರು ಸಿಡಿದೆದ್ದಿದ್ದಾರೆ.
ಈ ವಿಚಾರವನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಚಂದು ಎಂಬ ಹೆಸರಿನ ವ್ಯಕ್ತಿಯು ಈ ರೀತಿ ಕನ್ನಡ ಬಾವುಟವನ್ನು ಪಾಕಿಸ್ತಾನದ ಚಿಹ್ನೆಯೊಂದಿಗೆ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರೂಪೇಶ್ ರಾಜಣ್ಣ ಅವರು ಹೇಳುವಂತೆ ಈತ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಾನೆ. ಇವನ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.

ಈತನ ಹೆಸರು ಚಂದು ಅಂತ, ಈ ಅಯೋಗ್ಯನ ಮೇಲೆ ಈಗಾಗಲೇ ಶಿವಮೊಗ್ಗದಲ್ಲಿ ಕೇಸ್ ಆಗಿತ್ತು. ಈತ ಹೆಣ್ಣುಮಕ್ಕಳ ಬಗ್ಗೆ, ಕನ್ನಡ ಹೋರಾಟಗಾರರ ಬಗ್ಗೆ ಹಾಗೂ ಕನ್ನಡ ಬಾವುಟವನ್ನ ಈ ರೀತಿ ಪಾಕಿಸ್ತಾನ ಬಾವುಟದ ರೀತಿ ತಿರುಚಿ, ಚಿತ್ರಿಸಿ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಚಂದು ಅವರ ಮತ್ತೊಂದು ಪೋಸ್ಟ್ ಕೂಡ ಹಂಚಿಕೊಂಡಿದ್ದು, ಇದರಲ್ಲಿ ಅವಾಚ್ಯ ಪದಗಳಿಂದ ನಿಂದಿಸಲಾಗಿದೆ. ಇದನ್ನು ಕೂಡ ರೂಪೇಶ್ ರಾಜಣ್ಣ ಹಂಚಿಕೊಂಡಿದ್ದಾರೆ.
ಇಲ್ಲಿ ನೋಡಿ ಈತ ಬಳಸಿರೋ ಪದಗಳನ್ನು ಧರ್ಮಾಂಧನಾಗಿರೋ ಇವನು ಬಳಸಿರೋ ಪದಗಳನ್ನು ನೋಡಿ. ಈತನ ಮೇಲೆ ನಿಮ್ಮ ಶಿವಮೊಗ್ಗದಲ್ಲೇ ಕೇಸ್ ದಾಖಲಾಗಿದೆ. ದಯವಿಟ್ಟು ಈ ಕೂಡಲೇ ಇವನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಬೆಂಗಳೂರು ಪೊಲೀಸರು, ಪೊಲೀಸ್ ಕಮೀಷನರ್ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಆಗ್ರಹಿಸಿದ್ದಾರೆ.
ರೋಲ್‌ಕಾಲ್ ಕನ್ನಡ ಹೋರಾಟಗಾರರು ಅಂದ್ರೆ ಇಷ್ಟೇ...ಎಂದು ಆತ ಕನ್ನಡ ಬಾವುಟಕ್ಕೆ ಪಾಕಿಸ್ತಾನದ ಚಿಹ್ನೆ ಹಾಕಿರುವ ಫೋಟೋ ಹಂಚಿಕೊಂಡಿದ್ದಾನೆ. ಈ ಸ್ಕ್ರೀನ್‌ಶಾಟ್‌ಗಳನ್ನು ಹಲವರು ಹಂಚಿಕೊಂಡಿದ್ದು, ಕೂಡಲೇ ಈತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಆತ ಒಂದೆಡೆ ಕನ್ನಡ ಬಾವುಟವನ್ನು ಪಾಕಿಸ್ತಾನಕ್ಕೆ ಹೋಲಿಸಿ ಪೋಸ್ಟ್ ಹಂಚಿಕೊಂಡಿದ್ದಾನೆ. ಮತ್ತೊಂದೆಡೆ ಹೆಣ್ಣುಮಕ್ಕಳ ಬಗ್ಗೆ ಅತಿ ಕೆಟ್ಟ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.

"ಕನ್ನಡ ಹೋರಾಟಗಾರರ ಬಗ್ಗೆ ಕೊಳಕು ಪದಗಳಿಂದ ನಿಂದಿಸುವ ಈ ಕೆಟ್ಟ ಕ್ರಿಮಿ ಮೇಲೆ ಕಠಿಣ ಕ್ರಮ ಜರುಗಲೇಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿಬಂದಿದೆ. ಕನ್ನಡ ಹೋರಾಟಗಾರರನ್ನು ಟೀಕಿಸಲು ಬೇರೆ ಮಾರ್ಗಗಳಿದ್ದವು. ಆದರೆ, ಕನ್ನಡ ಬಾವುಟಕ್ಕೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ. ಅದರಲ್ಲೂ ಪಾಕಿಸ್ತಾನಕ್ಕೆ ಹೋಲಿಸಿರುವುದು ಅಕ್ಷಮ್ಯ ಅಪರಾಧ" ಎಂದು ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications