ನರೇಂದ್ರ ಮೋದಿ ವಿರುದ್ಧ ಬೆಂಗಳೂರು ಕೋರ್ಟ್‌ಗೆ ಖಾಸಗಿ ದೂರು
ಬೆಂಗಳೂರು, ಮೇ 25: ಚುನಾವಣಾ ಪ್ರಚಾರದ ವೇಳೆ ದೇಶದಲ್ಲಿ ಕಾಂಗೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಕೇಸು ಎದುರಿಸಬೇಕಾಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮೋದಿ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಹಾಗಾಗಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಪ್ರಕರಣ ಎದುರಿಸಬೇಕಾಗಿದೆ.

ಬೆಂಗಳೂರಿನ ಜಿಯಾವುರ್ ರಹಮಾನ್ ನೊಮಾನಿ ಎಂಬುವರು ನಗರದ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮೇ 23ರಂದು ಖಾಸಗಿ ದೂರು ಸಲ್ಲಿಸಿದ್ದಾರೆ.
ಏಕೆ ಈ ಕೇಸು?: ಅರ್ಜಿದಾರರು ಪ್ರಧಾನಿಯ ಭಾಷಣವು ಮುಸ್ಲಿಮರನ್ನು ನಿಂದಿಸುವ, ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿರುವ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರೇರೇಪಿಸುವಂತಿದೆ. ಈ ಮೂಲಕ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಪ್ರಧಾನಿ ಮೋದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಜತೆಗೆ ಕಳೆದ ತಿಂಗಳು ರಾಜಸ್ಥಾನದಲ್ಲಿ ನಡೆದಿದ್ದ ಪ್ರಚಾರ ಭಾಷಣದಲ್ಲಿ ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್ ಪ್ರಚೋದನೆ ನೀಡುವ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ಖಾಸಗಿ ದೂರಿನಲ್ಲಿ ಕೋರಿದ್ದಾರೆ.
ಮೋದಿ ಹೇಳಿಕೆ ಮುಸ್ಲಿಮ್ ಸಮುದಾಯದ ಸುರಕ್ಷತೆಗೆ ಬೆದರಿಕೆ ಒಡ್ಡುವಂತಾಗಿದೆ. ಇದು ಸಾಂವಿಧಾನಿಕ ಮೌಲ್ಯಗಳಾದ ಭ್ರಾತೃತ್ವ, ಏಕತೆ ಮತ್ತು ಸಮಗ್ರತೆ ಮೇಲಿನ ನೇರ ದಾಳಿಯಲ್ಲದೇ ಬೇರೇನೂ ಅಲ್ಲ. ತಮ್ಮ ದ್ವೇಷ ಭಾಷಣದ ಮೂಲಕ ಪ್ರಧಾನಿ ಮೋದಿ ಸಂವಿಧಾನದ 14, 17 ಮತ್ತು 51ಎ ವಿಧಿಗಳನ್ನು ಉಲ್ಲಂಘಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಈ ಪ್ರಕರಣ ಚುನಾವಣಾ ಆಯೋಗದ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿ, ದೂರು ದಾಖಲಿಸಿಕೊಂಡಿಲ್ಲ. ಆದ್ದರಿಂದ, ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿನ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ಮೋದಿ ತಾಯಂದಿರು, ಸಹೋದರಿಯರ ಬಂಗಾರ ಲೆಕ್ಕ ಹಾಕುವುದಾಗಿ, ಅದರ ಬಗ್ಗೆ ಮಾಹಿತಿ ಪಡೆಯುವುದಾಗಿ, ನಂತರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಅದನ್ನು ಯಾರಿಗೆ ಹಂಚುತ್ತಾರೆ? ಎಂದಿದ್ದರು.
ಅಷ್ಟೇ ಅಲ್ಲದೆ, ಮುಸ್ಲಿಮರು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿತ್ತು. ಅದರ ಅರ್ಥ, ಹೆಚ್ಚು ಮಕ್ಕಳಿರುವವರಿಗೆ ಹಂಚಿಕೆಯಾಗುತ್ತದೆ. ನುಸುಳುಕೋರರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನೀವು ಕಷ್ಟದಿಂದ ಸಂಪಾದಿಸಿದ ಹಣ ನುಸುಳುಕೋರರ ಪಾಲಾಗಬೇಕೆ?, ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಎಂದು ಭಾಷಣದಲ್ಲಿ ಪ್ರಶ್ನಿಸಿದ್ದರು.












Click it and Unblock the Notifications