ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜೊತೆ ಆತ್ಮಹತ್ಯೆ ಭಾಗ್ಯವನ್ನೂ ಕರುಣಿಸಿದೆ: ವಿಜಯೇಂದ್ರ
ಬೆಂಗಳೂರು, ಡಿಸೆಂಬರ್ 26: ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದು, ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಈ ಕುರಿತು ಟ್ವೀಟ್ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಜೊತೆಗಿರುವ ಫೋಟೋ ಮತ್ತು ಗುತ್ತಿಗೆದಾರ ಸಚಿನ್ ಡೆತ್‌ನೋಟ್ ಫೋಟೋವನ್ನು ಹಾಕಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪವನ್ನು ಮಾಡಿದ್ದಾರೆ.

ವಿಜಯೇಂದ್ರ ಪೋಸ್ಟ್: ಬಿ. ವೈ. ವಿಜಯೇಂದ್ರ, 'ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಮಂತ್ರಿಗಳು ತಮ್ಮ ಬಲಗೈ ಬಂಟರು ಹಾಗೂ ಆಪ್ತ ಸಹಾಯಕರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೀಡಿದಂತಿದೆ. ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತಸಹಾಯಕನ ಕಿರುಕುಳಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ, ಇದರ ಬೆನ್ನಲ್ಲೇ ವಿಧಾನ ಮಂಡಲದ ಸುವರ್ಣ ಸೌಧಕ್ಕೆ ನುಗ್ಗಿ ಶಾಸಕರಾದ ಸಿಟಿ ರವಿ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದ ಸುದ್ದಿ ಹಸಿಯಾಗಿರುವಾಗಲೇ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರನ ಕಿರುಕುಳ ಹಾಗೂ ಬೆದರಿಕೆಯಿಂದ ತತ್ತರಿಸಿದ್ದ ಬೀದರ್‌ನ ಗುತ್ತಿಗೆದಾರ ಸಚಿನ್ ಸುದೀರ್ಘ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಕರ್ನಾಟಕ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ನತದೃಷ್ಟ ಕುಟುಂಬಗಳನ್ನು ಅನಾಥವಾಗಿಸಲು ಹೊರಟಿದೆ. ಪ್ರತಿಯೊಂದು ವಿಷಯದಲ್ಲೂ ಅನಗತ್ಯ ಮೂಗು ತೂರಿಸಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದು ಆತ್ಮಹತ್ಯೆಗೊಳಗಾದ ದುರ್ದೈವಿ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಲಿ' ಎಂದು ಒತ್ತಾಯಿಸಿದ್ದಾರೆ.
'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ವಿಪರೀತ ಆರ್ಥಿಕ ಒತ್ತಡ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಸಚಿವರ ಕೈ ಕೆಳಗಿನ ಅಧಿಕಾರಿಗಳು ಹಾಗೂ ಆಪ್ತರ ಒತ್ತಡಗಳು ಗುತ್ತಿಗೆದಾರರನ್ನು ಉಸಿರುಗಟ್ಟಿಸುತ್ತಿವೆ' ಎಂದು ವಿಜಯೇಂದ್ರ ದೂರಿದ್ದಾರೆ.
'ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ಹಾಗೂ ಕಾಂಗ್ರೆಸ್ ಮುಖಂಡ ರಾಜುವಿನ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿಟ್ಟಿರುವ ಪತ್ರ ಇದಕ್ಕೆ ಸಾಕ್ಷಿ ಒದಗಿಸಿದೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಪಕ್ಷಪಾತಿಗಳಂತೆ ವರ್ತಿಸುವುದನ್ನು ಬಿಟ್ಟು ಪಾರದರ್ಶಕ ತನಿಖೆ ನಡೆಸದಿದ್ದರೆ ಈ ವಿಷಯವನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಿದೆ' ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
'ಸಾವಿಗೀಡಾದ ನತದೃಷ್ಟ ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಸರ್ಕಾರ ಈ ಕೂಡಲೇ ಆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಿ, ಮೃತ ಗುತ್ತಿಗೆದಾರ ಸಚಿನ್ ಪಡೆದಿದ್ದ ಗುತ್ತಿಗೆ ಕೆಲಸಗಳ ಬಾಕಿ ಉಳಿದಿರುವ ಹಣವನ್ನು ಪಾವತಿಸಿ ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮೂಲಕ ನ್ಯಾಯ ಒದಗಿಸಲಿ ಎಂದು ಒತ್ತಾಯಿಸುತ್ತೇನೆ' ಎಂದು ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications