ಕಲ್ಯಾಣ ಕರ್ನಾಟಕದಲ್ಲಿ 2 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ: ಸಿಎಂ ಬೊಮ್ಮಾಯಿ
ಕಲಬುರಗಿ, ನವೆಂಬರ್ 14: ಒಟ್ಟು ಎರಡು ಸಾವಿರ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಣ ವಾಗಲಿದ್ದು, ಸುಮಾರು ಆರು ಸಾವಿರ ಕೊಠಡಿಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲಬುರಗಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದೆ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಹೆಚ್ಚುವರಿ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀಡಲು ನಿರ್ಧರಿಸಲಾಗಿದೆ. ಇದೊಂದು ದೊಡ್ಡ ಕ್ರಾಂತಿಯಾಗಲಿದ್ದು ಇದನ್ನು ಮೂರು ವರ್ಷ ನಿರಂತರವಾಗಿ ಮಾಡಿದರೆ, ಕರ್ನಾಟಕದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಕೊಠಡಿಗಳ ಮೂಲಸೌಕರ್ಯದ ಕೊರತೆ ನೀಗಲಿದೆ. ಅದರ ಜೊತೆಗೆ ಮುಂದಿನ ಆಗಸ್ಟ್ 15 ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳ ಶೌಚಾಲಯ ಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕಾಗಿ 250 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಎರಡನೇ ಹಂತದ ನೇಮಕಾತಿಗೆ ಮುಂದಿನ ವಾರದಲ್ಲಿ ಅನುಮತಿ ನೀಡಲಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿದ್ದ ಕೊರತೆಯನ್ನು ಯಾವುದೇ ಸರ್ಕಾರ ಮುಟ್ಟಲೂ ಹೋಗಿರಲಿಲ್ಲ. ಆಮೂಲಾಗ್ರ ಬದಲಾವಣೆಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಅಗತ್ಯವಿರುವ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ತರಬೇತಿ ಹಾಗೂ ಪಠ್ಯ ಕ್ರಮದ ಬಗ್ಗೆ ಗಮನ ನೀಡಲಾಗಿದೆ. ಮುಂದಿನ ವರ್ಷ ನೂತನ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಿಕ್ಷಣ ದಲ್ಲಿಯೂ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಏನೇ ಪ್ರಗತಿ ಮಾಡಿದರೂ ವಿವಾದ ಸೃಷ್ಟಿ ಮಾಡುವ ಚಟವಿದೆ. ಪ್ರಗತಿಯ ಬಗ್ಗೆ ಆಸಕ್ತಿ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಬಗ್ಗೆ ಸಂತೋಷವಿಲ್ಲ. ಇಲ್ಲಿಯೂ ರಾಜಕಾರಣ ಮಾಡುತ್ತಾರೆ. ಇದನ್ನು ಮಾಡಿದರೆ ಸರ್ಕಾರಕ್ಕೆ ಅದರ ಶ್ರೇಯಸ್ಸು ಹೋಗುತ್ತದೆ ಎಂದು ಸಣ್ಣ ಪುಟ್ಟ ವಿಚಾರಗಳಿಗೆ ತಗಾದೆ ತೆಗೆದರೆ ಅದಕ್ಕೆ ನಾವು ಲಕ್ಷ್ಯ ಕೊಡುವುದಿಲ್ಲ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುತ್ತಿದ್ದೇವೆ ಎಂದು ತಿಳಿಸಿದರು.
ಖಂಡಿತ ಕೇಸರೀಕರಣ ಆಗುತ್ತಿಲ್ಲ. ಕೇಸರಿ ಎಂದರೆ ಕಣ್ಣು ಕೆಂಪೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಸನ್ಯಾಸಿ. ಜಗತ್ತಿಗೆ ವಿವೇಕ ನೀಡಿದವರು. ಅವರ ಹೆಸರಿನಲ್ಲಿ ಮಕ್ಕಳಿಗೆ ಪ್ರೇರಣೆ ಸಿಗಲಿ ಎಂದು ಯೋಜನೆ ರೂಪಿಸಿದೆ. ಒಳ್ಳೆ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚಿಯೇ ಹಚ್ಚುತ್ತೇವೆ: ಬಿ.ಸಿ ನಾಗೇಶ್
ಇನ್ನೂ ಕೇಸರಿಕರಣ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ 8,000 ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಡಲಾಗುತ್ತಿದೆ. ಹೊಸ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಆರ್ಕಿಟೆಕ್ಟರ್ ಏನಾದ್ರೂ ಕೇಸರಿ ಬಣ್ಣ ಚೆನ್ನಾಗಿದೆ ಎಂದು ಹೇಳಿದದೆ ಕೇಸರಿ ಬಣ್ಣ ಹಚ್ಚಿಯೇ ಹಚ್ಚುತ್ತೇವೆ ಎಂದು ಹೇಳಿದರು.

ವಿವೇಕ ಶಾಲೆಯ ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ. ಆರ್ಕಿಟೆಕ್ಟರ್ ಮೇಲೆ ಇದನ್ನ ಬಿಟ್ಟಿದ್ದೇವೆ. ಅವರು ಕೊಡುವ ಡಿಸೈನ್ ಮೇಲೆ ನಾವು ಡಿಸೈಡ್ ಮಾಡ್ತೀವಿ.ಅಲ್ಲದೇ ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೇಸರಿ ಇದೆ.ಅದನ್ನು ಯಾಕೆ ಬಿಟ್ಕೊಂಡಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications