GBA Election: ಜಿಬಿಎ ಚುನಾವಣೆ; ಯಾರಿಗೆಲ್ಲಾ ಟಿಕೆಟ್: ಜಿ.ಸಿ. ಚಂದ್ರಶೇಖರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 16: ಮುಂಬರುವ ಜಿಬಿಎ ಚುನಾವಣೆಗೆ ಯುವ ಕಾಂಗ್ರೆಸ್ ಮುಖಂಡರಿಗೂ ಟಿಕೆಟ್ ನೀಡುವ ಆಲೋಚನೆ ಇದೆ. ಅತ್ಯುತ್ತಮವಾಗಿ ಸಂಘಟನೆ ಮಾಡಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಕೊಳ್ಳಿ. ಇಂತಹ ಹೋರಾಟದಲ್ಲಿ ಭಾಗಿಯಾಗಿ, ಸಂಘಟನೆ ಮಾಡಬೇಕು. ಹೋರಾಟಕ್ಕೆ ಯುವ ಕಾಂಗ್ರೆಸ್ ವಿದ್ಯಾರ್ಥಿ ಕಾಂಗ್ರೆಸ್ ಕೈ ಜೋಡಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎನ್ನುವಂತೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತಕಳ್ಳತನ ವಿರುದ್ಧ ಪ್ರತಿಭಟನೆ ಮಾಡಿದೆವು. ಆ ಪ್ರತಿಭಟನೆಯಲ್ಲಿ 1 ಲಕ್ಷ ಜನ ಭಾಗವಹಿಸಿದ್ದರು. ಅಂದು ಹಚ್ಚಿದ ಪ್ರತಿಭಟನಾ ಕಿಚ್ಚು ದೇಶದಾದ್ಯಂತ ಹಬ್ಬಿದೆ. ಬಿಹಾರ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆಯೇ ಎಂದು ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ. ಕಾರಣ, ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಎರಡು ದೊಡ್ಡ ಬ್ರಹ್ಮಾಸ್ತ್ರಗಳು ಇವೆ. ಯಾವ ಬಿಜೆಪಿಯಲ್ಲ, ಅಮಿತ್ ಶಾ ಹಾಗೂ ಮೋದಿ ಅವರು ಬಂದರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ.

ದೊಡ್ಡ ನಾಯಕರಾಗಿ ಬೆಳೆಯಲು ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಉತ್ತಮ ವೇದಿಕೆ. ಅದಕ್ಕೆ ನೀವು ನಿಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ನ್ಯಾಯುತವಾಗಿ ಹೋರಾಟ ಮಾಡಿಕೊಂಡು ಮುಂದೆ ಬರಲು ಇದು ಉತ್ತಮ ವೇದಿಕೆ. ಯುವ ಕಾಂಗ್ರೆಸ್ ಮೂಲಕ ಬೆಳೆದ ಅನೇಕ ನಾಯಕರು ನಮ್ಮ ಮುಂದೆ ಇದ್ದಾರೆ. ಯಾವುದೇ ವಿಚಾರ ಇದ್ದರೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕು. ಯುವ ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಇಡೀ ಬೆಂಗಳೂರು ತಿರುಗಿ ನೋಡುವಂತೆ ಇರಬೇಕು.
ಮತ ಕಳ್ಳತನ ವಿರುದ್ಧ ನಡೆಸಲಾದ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಲ್ಲಿ 1.30 ಕೋಟಿ ಸಹಿ ಸಂಗ್ರಹ ಮಾಡಿದ್ದು, ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ಪೈಕಿ ನಮ್ಮ ರಾಜ್ಯದ ಯುವ ಕಾಂಗ್ರೆಸ್ 10 ಲಕ್ಷ ಸಹಿ ಸಂಗ್ರಹಿಸಿದ್ದು, ಇನ್ನೂ 5 ಲಕ್ಷ ಸಹಿ ಸಂಗ್ರಹಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಬಿಹಾರ ಗೆದ್ದಿರಬಹುದು. ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದಲ್ಲಿ ಮಾಧ್ಯಮ ಸೇರಿದಂತೆ ಎಲ್ಲರ ಊಹೆಗೂ ಮೀರಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯ? ಆಡಳಿತ ಪಕ್ಷ ಚುನಾವಣೆ ಸಮಯದಲ್ಲಿ 1.20 ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ನೀಡಿದರೆ ಅವರು ಯಾರಿಗೆ ಮತ ಹಾಕುತ್ತಾರೆ. ಈ ಬಾರಿ ಚುನಾವಮೆಯಲ್ಲಿ 71% ಮಹಿಳೆಯರು ಮತದಾನ ಮಾಡಿದ್ದು, ಪುರುಷರು 62% ಮತದಾನ ಮಾಡಿದ್ದಾರೆ.
ಬಿಜೆಪಿಯವರು ಚುನಾವಣಾ ಆಯೋಗವನ್ನು ಹೈಜಾಕ್ ಮಾಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಆಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿ, ಅಂಬೇಡ್ಕರ್ ಅವರ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಯುವ ಕಾಂಗ್ರೆಸ್ ಮುಖಂಡರು ನಾಯಕರಾಗಿ ಬೆಳೆಯಬೇಕಾದರೆ, ಚೇಳಾಗಿರಿ ಮಾಡಿ ಬರಬೇಡಿ. ಸ್ವಾಭಿಮಾನದ ಮೂಲಕ ಹೋರಾಟ ಮಾಡಿ ಮುಂದೆ ಬನ್ನಿ. ಆಗ ಮಾತ್ರ ನೀವು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ. ಸಮಾಜ ಯಾರ ಅಪ್ಪನ ಮನೆಯದ್ದಲ್ಲ. ಎಲ್ಲರಿಗೂ ಸೇರಿದೆ. ಯಾರು ಧೈರ್ಯವಾಗಿ ಮುಂದೆ ಬಂದು ನಿಲ್ಲುತ್ತಾರೋ ಅವರು ನಾಯಕರಾಗಿ ಬೆಳೆಯುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಹೇಳಿದರು.
ಕಾಂಗ್ರೆಸ್ ಪಕ್ಷದ ಮತ ಕಲ್ಳತನ ಸುಳ್ಳು ಮಾಡಲು ಬಿಹಾರದಲ್ಲಿ ಈ ರೀತಿ ಫಲಿತಾಂಶ ಬರುವಂತೆ ಮಾಡಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಕರ್ನಾಟಕದಲ್ಲಂತೂ ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ನಾಯಕರಿಲ್ಲ, ಜೆಡಿಎಸ್ ಪಕ್ಷ ಅಧೋಗತಿಗೆ ತಲುಪಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಸಮನಾಗಿ ಯಾರಾದರೂ ನಾಯಕರು ಬಿಜೆಪಿಯಲ್ಲಿ ಇದ್ದಾರಾ? ಈ ಮೈತ್ರಿಯಿಂದ ಯಶಸ್ಸು ಸಾಧಿಸುತ್ತೇವೆ ಎಂದು ಬಿಜೆಪಿ ನಾಯಕರು ನಂಬಿದ್ದರೆ ಮಣ್ಣು ಮುಕ್ಕುವುದರಲ್ಲಿ ಅನುಮಾನವಿಲ್ಲ.












Click it and Unblock the Notifications