Karnataka By Election: ʼಕರ್ನಾಟಕದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವುʼ
ಬೆಂಗಳೂರು, ನವೆಂಬರ್ 23: ಚುನಾವಣೋತ್ತರವಾಗಿ ನಡೆದಿರುವ ಮೂರು ಸಮೀಕ್ಷೆಗಳ ಫಲಿತಾಂಶ ಉಲ್ಟಾ ಆಗಲಿದೆ. ಆ ಸಮೀಕ್ಷೆ ಸುಳ್ಳಾಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ, ಹರ್ಯಾಣ ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆ ಸುಳ್ಳಾಗಿವೆ. ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಅಂತ ಹೇಳಿದ್ದೆ. ಗೆದ್ದರೂ ನಾನು ಗೆದ್ದಂತೆ, ಸೋತರೂ ನಾನು ಸೋತಂತೆ. ಯೋಗೇಶ್ವರ್ ಗೆ ಟಿಕೆಟ್ ಕೊಟ್ಟಿದ್ದೇ ನಾನು. ನನ್ನ ಮುಖ ಇಟ್ಟುಕೊಂಡೆ ಚುನಾವಣೆ ಮಾಡಿದ್ದೇನೆ. ನಾನು ಘೋಷಣೆ ಮಾಡಿದ ನಂತರ ಕುಮಾರಸ್ವಾಮಿ ಅವರು ಕೂಡ ನಾನು ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ನಾವಿದ್ದೇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಇಷ್ಟು ದಿನಗಳ ಕಾಲ ಅದಾನಿ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಈಗಲಾದರೂ ದೇಶದ ಗೌರವ ಉಳಿಸಲು ಅವರನ್ನು ಬಂಧಿಸಿ, ಕಾನೂನು ಚೌಕಟ್ಟಿಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಪರವಾಗಿ ಆಗ್ರಹಿಸಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಅದಾನಿ ಅವರ ಕಂಪನಿಗಳ ಬಗ್ಗೆ ಆರೋಪ ಮಾಡಿ ಜನರ ಗಮನ ಸೆಳೆಯುತ್ತಿದ್ದರು. ಕೇಂದ್ರ ತನಿಖಾ ಸಂಸ್ಥೆಗಳು ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ. ಈ ವಿಚಾರ ಸಂಸತ್ತಿನಿಂದ ಬೀದಿಗಳ ವರೆಗೂ ಚರ್ಚೆಯಾಯಿತು.
ಗ್ರೀನ್ ಎನರ್ಜಿ ಯೋಜನೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಅಮೆರಿಕದ ನ್ಯಾಯಾಲಯ ಆದೇಶ ನೀಡಿದ್ದು, ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ಭಾಗಿಯಾದವರನ್ನು ಕಾನೂನು ಚೌಕಟ್ಟಿನಲ್ಲಿ ತರಬೇಕು. ನಿಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರುಗಳನ್ನು ಬಂಧಿಸಿದ್ದೀರಿ. ಹೀಗಾಗಿ ಅದಾನಿ ಅವರನ್ನು ಕಾನೂನು ಚೌಕಟ್ಟಿನಲ್ಲಿ ತಂದು ಬಂಧಿಸಬೇಕು" ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಅದಾನಿ ಅವರ ರಕ್ಷಣೆ ಮಾಡಿ ಪ್ರಯೋಜನವಿಲ್ಲ. ದೇಶದ ಜನಸಾಮಾನ್ಯರು ಅವರ ಕಂಪನಿಗಳ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಅವರ ಕಂಪನಿ ಷೇರು ಬಿದ್ದು ಹೋಗುತ್ತಿದೆ. ಕೇಂದ್ರ ಸರ್ಕಾರ ಇವರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಅದಾನಿ ಅವರ ಆಸ್ತಿಗಳು ರಾಜ್ಯದಲ್ಲಿದ್ದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ತಾಕತ್ತಿದೆಯೇ ಎಂಬ ಬಿಜೆಪಿ ನಾಯಕರ ಸವಾಲಿನ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಮೊದಲು ತನಿಖೆ ಆರಂಭಿಸಿ, ತಮ್ಮ ಕರ್ತವ್ಯ ಮಾಡಲಿ. ತನಿಖೆ ಆರಂಭಿಸಿ ನಮ್ಮ ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಪತ್ರ ಬರೆದರೆ ನಮ್ಮ ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಿದೆ. ಇಷ್ಟು ದಿನ ಅವರು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಈಗ ಕ್ರಮ ಕೈಗೊಳ್ಳಲು ಮುಂದಾಗಲಿ ಎಂದರು.
20 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಅದರಿಂದ ಸರ್ಕಾರ ಹಿಂದೆ ಸರಿಯಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸ್ವಚ್ಛವಾಗಿ ನಡೆಯಲಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡುವುದಿಲ್ಲ. ಈ ವಿಚಾರವಾಗಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಚರ್ಚೆ ಮಾಡುತ್ತೇವೆ. ಮೊದಲು ಕೂಸು ಹುಟ್ಟಬೇಕು. ಆನಂತರ ಮುಂದಿನ ಕಾರ್ಯ ಮಾಡಬಹುದು ಎಂದರು.












Click it and Unblock the Notifications