ಸಿಎಂ ಆಯ್ಕೆ ವಿಚಾರ: 6.5 ಕೋಟಿ ಕನ್ನಡಿಗರಿಗೆ ಮಾಡಿದ ವಾಗ್ದಾನಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದ ರಣದೀಪ್ ಸುರ್ಜೆವಾಲಾ
ಬೆಂಗಳೂರು, ಮೇ. 15: ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಕರ್ನಾಟಕ ಕಾಂಗ್ರೆಸ್‌ನ ಕೇಂದ್ರ ವೀಕ್ಷಕರು ತಮ್ಮ ವರದಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ. ಮಂಗಳವಾರ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದರ ಜೊತೆಗೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು 6.5 ಕೋಟಿ ಕನ್ನಡಿಗರಿಗೆ ಮಾಡಿದ ಪ್ರತಿಜ್ಞೆಗೆ ಪಕ್ಷವು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಿಎಂ ಹುದ್ದೆಗೆ ಪ್ರಬಲ ಪೈಪೋಟಿಯಾಗಿರುವ ಸಿದ್ದರಾಮಯ್ಯ ಅವರು ಸೋಮವಾರವೇ ದೆಹಲಿಗೆ ತಲುಪಿದ್ದಾರೆ. ರಾಷ್ಟ್ರ ರಾಜಧಾನಿಗೆ ಹೋಗುವುದಿಲ್ಲ ಎಂದು ನೆಪಗಳನ್ನು ಹೇಳಿದ್ದ ಡಿಕೆ ಶಿವಕುಮಾರ್, ಮಂಗಳವಾರ ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಒಟ್ಟಾರೆ ಇಮದು ಸಂಜೆಯೊಳಗೆ ಹೊಸ ಸಿಎಂ ಘೋಷಣೆ ಸಾಧ್ಯತೆಯಿದೆ.

ಸಿಎಂ ಆಯ್ಕೆ ವಿಚಾರವಾಗಿ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ, "6.5 ಕೋಟಿ ಕನ್ನಡಿಗರಿಗೆ ಮಾಡಿದ ವಾಗ್ದಾನಕ್ಕೆ ಕಾಂಗ್ರೆಸ್ ಪಕ್ಷವು ನಿಲ್ಲುತ್ತದೆ. ವೀಕ್ಷಕರು ತಮ್ಮ ಲಿಖಿತ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ನಾಯಕರು ಮತ್ತು ಇತರ ಕೇಂದ್ರ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯವನ್ನು ದಾಖಲಿಸಿದ ನಂತರ, ಕಾಂಗ್ರೆಸ್ ಪಕ್ಷವು ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಕೆಲಸ ಮಾಡುತ್ತಿದೆ. ಅವರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಡಿಕೆ ಶಿವಕುಮಾರ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

ಭಾನುವಾರ ಬೆಂಗಳೂರಿನಲ್ಲಿ ತಡ ರಾತ್ರಿಯವರೆಗೂ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷವು (ಸಿಎಲ್‌ಪಿ) ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಹೆಸರನ್ನು ಆಯ್ಕೆ ಮಾಡಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. "ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ನೇಮಿಸಲು ಎಐಸಿಸಿ ಅಧ್ಯಕ್ಷರಿಗೆ ಈ ಮೂಲಕ ಅಧಿಕಾರವಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಣಯಿಸುತ್ತದೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಹೋಟೆಲ್‌ನಲ್ಲಿ ಭಾನುವಾರ ತಡರಾತ್ರಿ ಆರಂಭವಾದ ಸಭೆ ಮಧ್ಯರಾತ್ರಿ 1.30ರವರೆಗೆ ನಡೆಯಿತು. ಇದರಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 135 ಶಾಸಕರು ಭಾಗವಹಿಸಿದ್ದರು. ಸಭೆಯಲ್ಲಿ ವೀಕ್ಷಕರಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಭಾರತದ ಚುನಾವಣಾ ಆಯೋಗದ ಪ್ರಕಾರ, ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರದಿಂದ ದೂರವಿಟ್ಟಿದೆ. ಬಿಜೆಪಿ 66 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜೆಡಿಎಸ್ 19 ಸ್ಥಾನಗಳನ್ನು ಗಳಿಸಿದೆ. ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ ಒಂದು ಸ್ಥಾನ ಗಳಿಸಿದೆ.












Click it and Unblock the Notifications