ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 65ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 10: ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿ ತವು ತಳಮಟ್ಟದ ಸಂಘಟನೆಯಾಗಿದ್ದು, ಬಲಶಾಲಿಯಾಗಿದೆ. ನಮ್ಮ ಶಕ್ತಿ ಬೆಳೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಜೊತೆಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೂರನೇ ಹಂತದ ಚುನಾವಣಾ ಪೂರ್ವ ಪ್ರಚಾರ ಕಾರ್ಯ ನಡೆಯುತ್ತಿದೆ. ಬೂತ್ ವಿಜಯ್ ನಂತರ 'ವಿಜಯ್ ಸಂಕಲ್ಪ' ಯಾತ್ರೆ ಕೈಗೆತ್ತಿಕೊಳ್ಳಲಾಗಿದೆ. ಎಲ್ಲಾ ಮೋರ್ಚಾಗಳ ಸಮ್ಮೇಳನಗಳು ನಡೆಯುತ್ತಿವೆ. ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದಿನ ಬಿಎಸ್ ಯಡಿಯೂರಪ್ಪ ಅವರು ಮಾಡಿದ ಕೆಲಸಗಳು, ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳು ಮತ್ತು ಅವರ ಒಂದೂವರೆ ವರ್ಷದ ಅವಧಿಯಲ್ಲಿ ಮಾಡಿದ ಕೆಲಸಗಳಿಗೆ ಜನರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ 65ಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸಲಾಗುವುದು. 65ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗದಷ್ಟು ಹೀನಾಯವಾಗಿ ಸೋಲುತ್ತದೆ. ಶಿವಕುಮಾರ್ ಅವರು ತಮ್ಮದೇ ಪಕ್ಷದ ಚುನಾವಣಾ ಭವಿಷ್ಯದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ" ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿ ಚುನಾವಣೆ ವಿಭಿನ್ನವಾಗಿರುವುದರಿಂದ ಹಾಲಿ ಎಲ್ಲ ಶಾಸಕರಿಗೂ ಟಿಕೆಟ್ ನೀಡಿದ ಉದಾಹರಣೆ ಇಲ್ಲ. ಸಮೀಕ್ಷೆ, ಕಾರ್ಯನಿರ್ವಹಣೆ ಮತ್ತು ಇತರ ಮಾನದಂಡಗಳ ನಂತರವೇ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಬಗ್ಗೆ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಜನಾರ್ದನ ರೆಡ್ಡಿ ಪಕ್ಷಕ್ಕೆ ಮರಳುವ ವಿಷಯದ ಬಗ್ಗೆ ಮಾತನಾಡಿರುವ ಅವರು, 'ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಪಕ್ಷಕ್ಕೆ ಮರಳುವ ವಿಚಾರವಾಗಿ ಬಿಜೆಪಿ ಚರ್ಚೆ ನಡೆಸುತ್ತಿಲ್ಲ' ಎಂದು ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಮಾಜಿ ಸಚಿವರನ್ನು ಸೇರ್ಪಡೆಗೊಳಿಸಲಿದೆ ಎಂಬ ಊಹಾಪೋಹಗಳ ಹಿನ್ನೆಲೆ ಉತ್ತರ ನೀಡಿದ್ದಾರೆ.
"ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಮರಳುವ ವಿಷಯವನ್ನು ಪಕ್ಷವು ಚರ್ಚಿಸಿಲ್ಲ. ಈ ಬಗ್ಗೆ ಅವರು ಕೂಡ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಜನಾರ್ದನ ರೆಡ್ಡಿ ಅವರು ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ. ಅವರು ಹಲವು ವರ್ಷಗಳಿಂದ ರಾಜ್ಯದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications