ಬಿಜೆಪಿ ದಾಳಕ್ಕೆ ಠಕ್ಕರ್ ಕೊಡಲು ಟ್ರಬಲ್ ಶೂಟರ್ ಪ್ಲಾನ್: ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?
ಬೆಂಗಳೂರು,ಏಪ್ರಿಲ್12: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದೆ. ಇತ್ತ ಕಾಂಗ್ರೆಸ್ ನಾಯಕರನ್ನ ಚುನಾವಣೆಯಲ್ಲಿ ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಸಚಿವ ಆರ್ ಅಶೋಕ್ ಅವರನ್ನ ಕಣಕ್ಕಿಳಿಸಿದೆ.
ಸೋಲಿಲ್ಲದ ಸರದಾರ ಎಂದು ಕರೆಸಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಕನಕಪುರದಲ್ಲಿ ಕಟ್ಟಿ ಹಾಕುವ ಬಿಜೆಪಿ ಪ್ರಯತ್ನಕ್ಕೆ ಠಕ್ಕರ್ ನೀಡಲು ಮುಂದಾಗಿರುವ ಕಾಂಗ್ರೆಸ್, ಪದ್ಮನಾಭನಗರದಲ್ಲಿ ಸಂಸದ ಡಿ.ಕೆ.ಸುರೇಶ್‍ರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ.

ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಟ್ಟಿ ಬಿಡುಗಡೆಯ ನಂತರ ಅಳೆದುತೂಗಿ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್ 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ರಾಜಕೀಯ ಎದುರಾಳಿಯಾಗಿರುವ ಡಿ ಕೆ ಶಿವಕುಮಾರ್ ಅವರನ್ನ ಕನಕಪುರದಲ್ಲಿ ಸೋಲಿಸಲು ಬಿಜೆಪಿ ಸಚಿವ ಆರ್.ಅಶೋಕ್‍ರನ್ನು ಕಣಕ್ಕಿಳಿಸಿದೆ. ಇನ್ನೂ ಅಶೋಕ್ ಹಾಲಿ ಪ್ರತಿನಿಧಿಸುತ್ತಿರುವ ಪದ್ಮನಾಭನಗರ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿದೆ.
ಇನ್ನೂ ಕಾಂಗ್ರೆಸ್‍ನ ಪ್ರಭಾವಿ ನಾಯಕರನ್ನು ಸೋಲಿಸಲು ಜಾತಿ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮೇಲ್ನೊಟಕ್ಕೆ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಿದ್ದು, ಆರ್ ಅಶೋಕ್ ಸ್ಪರ್ಧಿಸುತ್ತಿದ್ದ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರಾದ ಸಂಸದ ಡಿ ಕೆ ಸುರೇಶ್ ಅವರನ್ನ್ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ನಡೆಸಿದೆ.
ಈಗಾಗಲೇ ಕಾಂಗ್ರೆಸ್ 166 ಕ್ಷೇತ್ರಗಳಲ್ಲಿ ಅಭಜ್ಯರ್ಥಿಗಳನ್ನ ಘೋಷಿಸಿದ್ದು, ಅಶೋಕ್ ಸ್ಪರ್ಧಿಸುತ್ತಿದ್ದ ಪದ್ಮನಾಭನಗರ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ರಘುನಾಥ್ ನಾಯ್ಡುರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು. ಬಿಜೆಪಿ ತಂತ್ರಗಾರಿಕೆ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಪ್ರತಿತಂತ್ರವನ್ನ ಬದಲಾವಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಪ್ರತಿಭಾರಿಯೂ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ದುರ್ಬಲರಿದ್ದಾರೆ. ಹೀಗಾಗಿ ಆರ್ ಅಶೋಕ್ ಗೆಲುವು ಸುಲಭ ಎಂಬ ಲೆಕ್ಕಾಚಾರಗಳಿದ್ದವು. ಇತ್ತ ಬಿಜೆಪಿ ಹೈಕಮಾಂಡ್ ಕನಕಪುರದಲ್ಲಿ ಹೆಚ್ಚುವರಿಯಾಗಿ ಸ್ಪರ್ಧೆ ಮಾಡಲು ಅಶೋಕರನ್ನು ಬಿಜೆಪಿ ಕಣಕ್ಕಿಳಿಸುವ ದಾಳಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಇನ್ನೂ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿರುವ ಡಿ.ಕೆ.ಶಿವಕುಮಾರ್ ವಿರುದ್ಧವೇ ಬಿಜೆಪಿ ಸಂಚು ನಡೆಸಿರುವುದು ಒಳಗೊಳಗೆ ಆಕ್ರೋಶಕ್ಕೆ ಕಾರಣವಾಗಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಶೋಕ್ ಸ್ಪರ್ಧೆಯಿಂದ ಡಿ.ಕೆ.ಶಿವಕುಮಾರ್ ಗೆಲುವು ತ್ರಾಸದಾಯಕವಾಗಲಿದೆ ಎಂಬ ಲೆಕ್ಕಾಚಾರಗಳಿವೆ. ಅಶೋಕ್‍ಗೆ ಪದ್ಮನಾಭನಗರದಲ್ಲಿ ಟಕ್ಕರ್ ನೀಡಲು ರಘುನಾಥ್ ನಾಯ್ಡು ಅವರ ಬದಲಿಗೆ ಡಿ.ಕೆ.ಸುರೇಶ್‍ರನ್ನು ಕಣಕ್ಕಿಳಿಸಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನೂ ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿದ ಅವರು, ರಘುನಾಥ್ ನಾಯ್ಡು ಸ್ಥಳೀಯವಾಗಿ ಪ್ರಬಲ ಸಮುದಾಯವನ್ನು ಹೊಂದಿದ್ದಾರೆ. ಅಶೋಕ್ ಅವರ ಜೊತೆ ಮೊದಲಿನಿಂದಲೂ ಜಿದ್ದಾಜಿದ್ದಿನ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗ ಡಿ.ಕೆ.ಸುರೇಶ್‍ರನ್ನು ಕಣಕ್ಕಿಳಿಸಬೇಕು ಎಂಬ ಒತ್ತಡ ಇದೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧೆ ಕುರಿತು ಸಂಸದ ಡಿ ಕೆ ಸುರೇಶ್ ಮಾತನಾಡಿ, ಸದ್ಯಕ್ಕೆ ಏನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications