ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವೆ: ಶಾಸಕ ಭರವಸೆ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಕೊಲೆ ಕೇಸ್‌ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಜೈಲು ಸೇರಿದ್ದಾರೆ. ಮನೆಗೆ ಆಧಾರವಾಗಿದ್ದ ರೇಣುಕಾಸ್ವಾಮಿ ನಿಧನದ ನಂತರ ಅವರ ಕುಟುಂಬಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ರೇಣುಕಾಸ್ವಾಮಿ ದಂಪತಿಗೆ ಗಂಡು ಮಗು ಜನಿಸಿದ್ದು, ಇದೀಗ ಕುಟುಂಬ ನಿರ್ವಹಣೆ ಸವಾಲಾಗಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಅವರ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದರು. ಹೀಗಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಶಾಸಕರೊಬ್ಬರು ಮುಂದೆ ಬಂದಿದ್ದಾರೆ.
ಹೌದು ರೇಣುಕಾಸ್ವಾಮಿ ಅವರ ದುಡಿಮೆಯಲ್ಲೇ ಕುಟುಂಬ ಬದುಕು ಸಾಗಿಸುತ್ತಿತ್ತು. ಆದರೆ ಅಶ್ಲೀಲ ಮೆಸೇಜ್ ಮಾಡಿದ ಕಾರಣಕ್ಕೆ ಅವರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಪ್ರಕರಣ ಕೋರ್ಟ್‌ನಲ್ಲಿದೆ. ಕಣ್ಮುಂದೆ ಇದ್ದ ಮಗನನ್ನ ಕಳೆದುಕೊಂಡು ಅವರ ಪೋಷಕರು ಕಣ್ಣೀರಿನಲ್ಲೇ ದಿನ ಕಳೆಯುತ್ತಿದ್ದಾರೆ. ಮದುವೆಯಾದ ಒಂದೇ ವರ್ಷಕ್ಕೆ ಪತಿ ರೇಣುಕಾಸ್ವಾಮಿಯನ್ನ ಕಳೆದುಕೊಂಡು ಸಹನಾ ಅವರು ದಿಕ್ಕುತೋಚದಂತಾಗಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಶಾಸಕರೊಬ್ಬರು ರೇಣುಕಾಸ್ವಾಮಿ ಕುಟುಂಬಕ್ಕೆ ನೆರವಾಗಿದ್ದಾರೆ.

ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಬೇಕು. ಅವರ ಪತ್ನಿ ಸಹನಾ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡಬೇಕು ಎಂದು ಹಲವರು ಬೇಡಿಕೆ ಇಟ್ಟಿದ್ದರು. ಇತ್ತೀಚೆಗೆ ರೇಣುಕಾಸ್ವಾಮಿ ಅವರ ಕುಟುಂಬಸ್ಥರನ್ನು ಭೇಟಿಯಾಗಿರುವ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರು ಸಹನಾ ಅವರಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ರೇಣುಕಾಸ್ವಾಮಿ ಕುಟು ಅವರ ನಿವಾಸಕ್ಕೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಮುಂದೆ ಕುಟುಂಬದ ನಿರ್ವಹಣೆಗಾಗಿ ಅನುಕೂಲವಾಗಲು ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಯಾವುದಾದರೂ ಸರ್ಕಾರಿ ಸಂಸ್ಥೆಗಳಲ್ಲಿ ಅಥವಾ ಮಠಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಶಾಸಕ ಅಭಯ ನೀಡಿದ್ದಾರೆ.
ಕ್ಲರ್ಕ್ ಹುದ್ದೆಯಾದ್ರೂ ಕೊಡಿಸುವೆ
ಮುರುಘಾಮಠದ ಆಡಳಿತಾಧಿಕಾರಿ ಅವರಿಗೆ ಶಾಸಕ ಅಲ್ಲೇ ಕರೆ ಮಾಡಿ, ಮಠದ ಯಾವುದಾದರೂ ಸಂಸ್ಥೆಯಲ್ಲಿ ಸಹನಾ ಅವರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿರಿಗೆರೆಯ ತರಳಬಾಳು ಮಠದಲ್ಲೂ ಕೆಲಸ ಕೊಡಿಸಲು ಪ್ರಯತ್ನಿಸುವೆ. ಇಲ್ಲದಿದ್ದರೆ ಸರ್ಕಾರಿ ಅನುದಾನಿತ ಸಂಸ್ಥೆಯಲ್ಲಿ ಒಂದು ಕ್ಲರ್ಕ್ ಹುದ್ದೆಯನ್ನಾದರೂ ಕೊಡಿಸುತ್ತೇನೆ ಎಂದು ಶಾಸಕ ರಘುಮೂರ್ತಿ ಆಶ್ವಾಸನೆ ನೀಡಿದ್ದಾರೆ.
ರೇಣುಕಾಸ್ವಾಮಿ ಹಾಗೂ ಸಹನಾ ಅವರು ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿತ್ತು. ಅವರ ಮೊದಲ ವಿವಾಹ ವಾರ್ಷಿಕೋತ್ಸವದ ಸಮಯದಲ್ಲೇ ರೇಣುಕಾಸ್ವಾಮಿ ಅವರ ಕೊಲೆಯ ಕಾರಣ ಮನೆಯಲ್ಲಿ ದುಃಖ ಆವರಿಸಿತ್ತು. ರೇಣುಕಾಸ್ವಾಮಿ ಮೃತಪಟ್ಟ ಸಮಯದಲ್ಲಿ ಅವರ ಪತ್ನಿ ಸಹನಾ ಗರ್ಭಿಣಿಯಾಗಿದ್ದರು. ರೇಣುಕಾಸ್ವಾಮಿ ನಿಧನದ ನಂತರ ಅವರ ಪತ್ನಿ ಸಹನಾಗೆ ಕಳೆದ ವರ್ಷ ಅಕ್ಟೋಬರ್ 16ರಂದು ಗಂಡು ಮಗು ಜನಿಸಿತ್ತು.












Click it and Unblock the Notifications