ಕಮಲ್ ಹಾಸನ್‌ಗೆ ಬುದ್ಧಿ ಕಲಿಸಲು ಹೀಗೆ ಮಾಡಿ: ಶಾಸಕ ಪ್ರದೀಪ್ ಈಶ್ವರ್ ಮಹತ್ವದ ಸಲಹೆ
ತಮಿಳು ನಟ ಕಮಲ್ ಹಾಸನ್ ಕನ್ನಡಿಗರು ಎಷ್ಟೇ ಹಾರಾಡಿದರೂ ಕ್ಷಮೆ ಕೇಳಲ್ಲ ಎಂದು ಮೊಂಡಾಟ ಮುಂದುವರಿಸಿದ್ದಾರೆ. ಇದೀಗ ಎಲ್ಲೆಡೆಯಿಂದಲೂ ಕಮಲ್ ಹಾಸನ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು, ಅವರ ಸಿನಿಮಾಗಳ ರಿಲೀಸ್‌ಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈ ವಿಚಾರವಾಗಿ ತಮ್ಮದೇ ಸ್ಟೈಲಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಕಮಲ್ ಹಾಸನ್‌ಗೆ ಬುದ್ಧಿ ಕಲಿಸಲು ಏನು ಮಾಡಬೇಕು? ಎಂದು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಜೊತೆಗೆ ಕಮಲ್ ಅವರಿಗೆ ಖಡಕ್ ಎಚ್ಚರಿಕೆಯೂ ನೀಡಿದ್ದಾರೆ.
ಕಮಲ್ ಹಾಸನ್ ಅವರಿಗೆ ಸಾಹಿತ್ಯದ ಬಗ್ಗೆ ಒಂದಿಷ್ಟೂ ಐಡಿಯಾ ಇಲ್ಲ ಅನಿಸುತ್ತೆ. ಸಾವಿರಾರು ವರ್ಷಗಳ ಇತಿಹಾಸ ಇರೋದು ನಮ್ಮ ಕನ್ನಡಕ್ಕೆ. ನಾವು ನೆನ್ನೆಯೂ ಡೆಡ್‌ಲೈನ್ ಕೊಟ್ಟಿದ್ದೀವಿ. ಆದರೆ ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ಯಾವುದೇ ಕಾರಣಕ್ಕೆ ಕಮಲ್ ಹಾಸನ್ ಸಿನಿಮಾಗಳಲ್ಲಿ ಕರ್ನಾಟಕದಲ್ಲಿ ರಿಲೀಸ್ ಆಗೋಕೆ ಬಿಡೋದಿಲ್ಲ ಎಂದು ಪ್ರದೀಪ್ ಈಶ್ವರ್ ವಾರ್ನಿಂಗ್ ಕೊಟ್ಟಿದ್ದಾರೆ.

ಅವರ ಭಾಷೆ ಮೇಲೆ ಪ್ರೀತಿ ಇದ್ರೆ ಅವರನ್ನ ಭಾಷೆಯನ್ನ ಹೊಗಳಿಕೊಳ್ಳಲಿ. ನಮ್ಮ ಭಾಷೆಯನ್ನ ತೆಗಳುವ ಅಗತ್ಯವೇನಿತ್ತು? ಮೊದಲ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ ಅನ್ನೋ ವಿಚಾರವೂ ಕಮಲ್ ಹಾಸನ್‌ಗೆ ಗೊತ್ತಿಲ್ಲ. ಹಾಗೆಯೇ ಅತಿ ಹೆಚ್ಚು ಜ್ಞಾನಪೀಠ ಬಂದಿರೋದು ಕನ್ನಡಕ್ಕೆ ಅಂತಲೂ ಕಮಲ್‌ಗೆ ಗೊತ್ತಿಲ್ಲ. ದಕ್ಷಿಣ ಭಾರತದಲ್ಲಿ ಪದ್ಮಶ್ರೀ, ಭಾರತರತ್ನ ಹೆಚ್ಚಾಗಿ ಪಡೆದಿರುವುದು ಕೂಡ ಕನ್ನಡಿಗರು ಅನ್ನೋದು ಅವರಿಗೆ ತಿಳಿದಿಲ್ಲ. ಸಂಸ್ಕೃತಕ್ಕೆ ಸ್ಫೂರ್ತಿ ಕನ್ನಡ ಎಂತಲೂ ಗೊತ್ತಿಲ್ಲ. ಜಗತ್ತೇ ಮೆಚ್ಚುವ ಮೇಧಾವಿಗಳನ್ನು ಕೊಟ್ಟಿದ್ದು ಕೂಡ ಕರ್ನಾಟಕ ಅನ್ನೋದು ಕೂಡ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದ.ರಾ.ಬೇಂದ್ರೆ ಅವರದ್ದು ಮರಾಠಿ ಭಾಷೆಯಾದ್ರೂ ಅವರಿಗೆ ಕನ್ನಡ ಕಲಿಸಿ ಜ್ಞಾನಪೀಠ ಪ್ರಶಸ್ತಿ ಕೊಡಿಸಿದ್ದು ಕರ್ನಾಟಕ. ಇದ್ಯಾವುದೂ ಕಮಲ್ ಹಾಸನ್‌ಗೆ ಗೊತ್ತಿಲ್ಲ, ವಿವಾದ ಮಾಡುವುದಷ್ಟೇ ಅವರಿಗೆ ಗೊತ್ತಿದೆ. ಕಮಲ್ ಅವರಿಗೆ ನಿಜವಾಗಿಯೂ ನೈತಿಕತೆ ಅನ್ನೋದು ಇದ್ರೆ ನಮ್ಮ ಕನ್ನಡಿಗರ ಕ್ಷಮೆ ಕೇಳಬೇಕು. ನಾನು ಮತ್ತೊಮ್ಮೆ ಎಚ್ಚರಿಕೆ ಕೊಡ್ತಿದ್ದೀನಿ, ನೀವು ಕ್ಷಮೆ ಕೇಳದಿದ್ರೆ ಕರ್ನಾಟಕದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬ್ಯಾನ್ ಮಾಡ್ತೀವಿ ಎಂದು ಪ್ರದೀಪ್ ಈಶ್ವರ್ ಎಚ್ಚರಿಸಿದ್ದಾರೆ.
ಕಮಲ್ ಜೊತೆ ಕನ್ನಡದವರು ನಟಿಸಬೇಡಿ
ಜೊತೆಗೆ ಕಮಲ್ ಹಾಸನ್ ಅವರನ್ನು ಕಂಪ್ಲೀಟ್ ಆಗಿ ಬ್ಯಾನ್ ಮಾಡ್ತೀವಿ. ನಮ್ಮ ಕನ್ನಡದ ನಟರಿಗೆ ನಿಜವಾಗಿಯೂ ಕನ್ನಡದ ಮೇಲೆ ಪ್ರೀತಿ ಇದ್ರೆ ಕಮಲ್ ಹಾಸನ್ ಜೊತೆ ನಟಿಸಬೇಕು ಎಂದು ಹೇಳಿದ್ದಾರೆ. ಅವರು ಕ್ಷಮೆ ಕೇಳುವವರೆಗೆ ಅವರೊಂದಿಗೆ ಕನ್ನಡದವರು ನಟಿಸಬೇಡಿ. ಇಲ್ಲದಿದ್ದರೆ ಕಮಲ್ ಅವರನ್ನು ಬ್ಯಾನ್ ಮಾಡುವಂತೆ ನಾನು ಕೂಡ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರು ತಮ್ಮ ಥಗ್ ಲೈಫ್ ಸಿನಿಮಾ ರಿಲೀಸ್ ವೇಳೆಯೇ ಕನ್ನಡದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಈ ವಾರ ಸಿನಿಮಾ ರಿಲೀಸ್ ಆಗಲಿದ್ದು, ಕರ್ನಾಟಕದಲ್ಲಿ ಥಗ್‌ಲೈಫ್ ಬ್ಯಾನ್ ಮಾಡಲು ಥಿಯೇಟರ್‌ಗಳು ಕೂಡ ಸಾಥ್ ನೀಡುತ್ತಿವೆ. ಒಂದು ವೇಳೆ ವಿರೋಧದ ನಡುವೆಯೂ ಸಿನಿಮಾ ರಿಲೀಸ್ ಆದ್ರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಹೋರಾಟಗಾರರು ವಾರ್ನಿಂಗ್ ಕೊಟ್ಟಿದ್ದಾರೆ.












Click it and Unblock the Notifications