ಬಿಜೆಪಿಯಲ್ಲಿ ಆಧುನಿಕ ದುಷ್ಯಾಸನರೇ ತುಂಬಿದ್ದಾರೆ: ಪ್ರಿಯಾಂಕ್ ಹೀಗಂದಿದ್ದೇಕೆ?
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕ ಆರ್.ಅಶೋಕ್ ನಡುವೆ ಟಾಕ್ ವಾರ್ ಜೋರಾಗಿದೆ. ಏಟು ಎದುರೇಟು ಎನ್ನುವಂತೆ ಇಬ್ಬರೂ ವಾಗ್ಯುದ್ಧಕ್ಕಿಳಿದಿದ್ದಾರೆ. ಸದ್ಯ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯಲ್ಲಿ ಆಧುನಿಕ ದುಷ್ಯಾಸನರೇ ತುಂಬಿದ್ದಾರೆ ಎಂದು ದೂರಿದ್ದು, ಅಶೋಕ್ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಶೋಕ್ ಅಣ್ಣ, ವಾಟ್ಸಪ್ ಯೂನಿವರ್ಸಿಟಿಯಲ್ಲಿ ಕಲಿತ ನಿಮ್ಮ ಅಪ್ರಸ್ತುತ ಪ್ರಶ್ನೆಗಳಿಗಿಂತ, ನಿಮ್ಮವರ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತುತ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ತೋರಿಸಿ ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ. ಯಡಿಯೂರಪ್ಪನವರಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಕುಟುಂಬ ಭವಿಷ್ಯದ ದಿಕ್ಕು ಕಾಣದೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಕೈ ಹಾಕಿದ ಯಡಿಯೂರಪ್ಪನವರ ಕೃತ್ಯಕ್ಕೆ ವಿಜಯೇಂದ್ರರನ್ನು ಹೊಣೆ ಮಾಡಿ ರಾಜೀನಾಮೆ ಕೇಳುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಏಡ್ಸ್ ಸೋಂಕನ್ನು ರಾಜಕೀಯ ವಿರೋಧಿಗಳಿಗೆ ಹಬ್ಬಿಸಲು ಪ್ರಯತ್ನಿಸಿದ್ದ ಹಾಗೂ ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಮುನಿರತ್ನರ ರಾಜೀನಾಮೆ ಪಡೆದು ಪಕ್ಷದಿಂದ ಹೊರಗಟ್ಟುವುದು ಯಾವಾಗ? ಅಶೋಕ್ ಅವರೇ... ನಿಮಗೇ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದರು ಎಂಬ ವಿಚಾರ ನೆನಪಿದೆ ತಾನೇ? ಎಂದು ಲೇವಡಿ ಮಾಡಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ದೌರ್ಜನ್ಯ ನಡೆಸುವುದು ನಿಮ್ಮ ಪಕ್ಷದವರ ಬೇಸಿಕ್ ಕ್ವಾಲಿಫಿಕೇಶನ್ ಇರಬಹುದೇನೋ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಅತಿ ಹೆಚ್ಚು ಜನ ನಿಮ್ಮ ಪಕ್ಷದಲ್ಲೇ ಇರುವುದು! ಈಗ ಹೊಸದಾಗಿ ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯೊಬ್ಬನ ಅತ್ಯಾಚಾರದ ವಿಷಯ ಹೊರಬಂದಿದೆ. ಅಶೋಕ್ ಅವರೇ, ಈ ನಾಡಿನ ಮಹಿಳೆಯರಲ್ಲಿ ನಿಮ್ಮ ಪಕ್ಷ ಕ್ಷಮೆ ಕೇಳುವುದು ಯಾವಾಗ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಮಹಿಳೆಯರ ಮಾನದ ಮೇಲೆ ಪ್ರಹಾರ ನಡೆಸಿವುದೇ ನಕಲಿ ಧರ್ಮ ರಕ್ಷಕರ ಅಸಲಿ ಕೃತ್ಯವಾಗಿದೆ, ಅಲ್ಲವೇ ಅಶೋಕ್ ಅವರೇ?
ಕೇಸರಿ ಶಾಲಿನ ಮರೆಯಲ್ಲಿ ನಿಮ್ಮೆಲ್ಲ ಕುಕೃತ್ಯಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಆಧುನಿಕ ದುಷ್ಯಾಸನರೇ ತುಂಬಿರುವ ಬಿಜೆಪಿಯಿಂದ ಧರ್ಮ, ಸಂಸ್ಕೃತಿ, ಪರಂಪರೆಯ ಮಾತುಗಳನ್ನು ಕೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಹರಿಹಾಯ್ದಿದ್ದಾರೆ.

ನಾವು ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರ ರೀತಿ ಎಲೆಕ್ಷನ್ ಹಿಂದೂಗಳು ಅಲ್ಲ, ಎಲೆಕ್ಷನ್ ಅಂಬೇಡ್ಕರ್ ವಾದಿಗಳೂ ಅಲ್ಲ ಎಂದು ಆರ್.ಅಶೋಕ್ ಟಾಂಗ್ ನೀಡಿದ್ದರು. ತಾವು ಹೇಳಿಕೊಳ್ಳುವಂತೆ ತಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಅಂಬೇಡ್ಕರ್ ವಾದಿಗಳಾಗಿದ್ದಾರೆ ನೆಹರು ಅವರಾಗಲಿ, ಇಂದಿರಾ ಗಾಂಧಿ ಅವರಾಗಲಿ, ರಾಜೀವ್ ಗಾಂಧಿ ಅವರಾಗಲಿ ನೀಲಿ ಶಾಲು ಧರಿಸಿದ್ದ ಒಂದೇ ಒಂದು ಫೋಟೋ ತೋರಿಸಿ ನೋಡೋಣ ಎಂದು ಸವಾಲು ಹಾಕಿದ್ದರು.
ಪಾಪ ನಿಮ್ಮ ನಕಲಿ ಗಾಂಧಿ ಪಕ್ಷದ ಥರ್ಡ್ ಟೈಂ ಫೇಲ್ ಸ್ಟಾರ್ ಕಾಮಿಡಿಯನ್ ಚುನಾವಣೆ ಬಂದಾಗಲೆಲ್ಲ ಕೇಸರಿ ಬಟ್ಟೆ, ಕೇಸರಿ ಶಾಲು, ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ತಾನು ಕೌಲ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಮುತ್ತಾತ ನೆಹರೂ ಅವರಾಗಲಿ, ಅಜ್ಜಿ ಇಂದಿರಾ ಗಾಂಧಿ ಅವರಾಗಲಿ, ಅಪ್ಪ ರಾಜೀವ್ ಗಾಂಧಿ ಅವರಾಗಲಿ, ಅಮ್ಮ ಸೋನಿಯಾ ಗಾಂಧಿ ಅವರಾಗಲಿ ಒಂದು ದಿನವೂ ಕೇಸರಿ, ಕುಂಕುಮ, ಗುಡಿ ಗೋಪುರಗಳ ಹತ್ತಿರವೂ ಸುಳಿದಿದ್ದನ್ನು ನಾನಂತೂ ಕಂಡಿಲ್ಲ. ನೀವೇನಾದರೂ ಕಂಡಿದ್ದರೆ ಒಂದು ಫೋಟೋ ತೋರಿಸಿ ಎಂದು ಕೇಳಿದ್ದರು.












Click it and Unblock the Notifications