ವಿಶೇಷ ಲೇಖನ; ಬಿಜೆಪಿ ವಿರುದ್ಧದ ‘ಕೈ’ ಹೋರಾಟಕ್ಕೆ ಮೇಕೆದಾಟು ಮುನ್ನುಡಿ
ಬೆಂಗಳೂರು, ಜನವರಿ 02; ಕರ್ನಾಟಕ ಕಾಂಗ್ರೆಸ್ 2023 ಅನ್ನು ಹೋರಾಟದ ವರ್ಷ ಎಂಬುದಾಗಿ ಘೋಷಿಸಿದೆ. ಅದರಂತೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9 ರಿಂದ 19ರವರೆಗೆ 11 ದಿನಗಳ 165 ಕಿ. ಮೀ. ಪಾದಯಾತ್ರೆಯನ್ನು ಆರಂಭಿಸುವ ಮೂಲಕ ಹೋರಾಟಕ್ಕೆ ಮುನ್ನುಡಿ ಬರೆಯಲು ಹೊರಟಿದೆ.
ಕೊರೊನಾ ಮತ್ತು ಓಮಿಕ್ರಾನ್ ಸಂಕಷ್ಟದ ನಡುವೆ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದ್ದು, ಈಗಾಗಲೇ ಅಲ್ಲಲ್ಲಿ ಪೂರ್ವಭಾವಿ ಸಭೆ ನಡೆಸುತ್ತಾ ಪಕ್ಷದ ಕಾರ್ಯಕರ್ತರನ್ನು ಪಾದಯಾತ್ರೆಗೆ ಸಜ್ಜುಗೊಳಿಸಲಾಗುತ್ತಿದೆ. ಈ ಪಾದಯಾತ್ರೆಯಿಂದ ಮೇಕೆದಾಟು ಯೋಜನೆ ಅನುಷ್ಠಾನವಾಗುತ್ತೋ ಇಲ್ಲವೋ? ಅದು ಮುಖ್ಯವಲ್ಲ. ಇಲ್ಲಿ ಕಾಂಗ್ರೆಸ್ ಪಾದಯಾತ್ರೆ ಯಶಸ್ವಿಯಾಗಬೇಕು ಅದಷ್ಟೇ 'ಕೈ' ನಾಯಕರಿಗೆ ಪ್ರಮುಖವಾಗಿದೆ. ವರ್ಷದ ಮೊದಲೇ ಬೃಹತ್ ಪಾದಯಾತ್ರೆ ಮೂಲಕ ಆಡಳಿತರೂಢ ಬಿಜೆಪಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸುವ ಆತುರದಲ್ಲಿರುವುದು ಎದ್ದು ಕಾಣುತ್ತಿದೆ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಬಗ್ಗೆ ಈ ಹಿಂದೆಯೇ ಜೆಡಿಎಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ ಕಾಂಗ್ರೆಸ್ ಇದೀಗ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ. ಇದು ಜೆಡಿಎಸ್‌ನ ಇರಿಸುಮುರಿಸಿಗೆ ಕಾರಣವಾಗಿದೆ. ಅದನ್ನು ಆಚೆಗಿಟ್ಟು ನೋಡಿದರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ 9ರಿಂದ ಪಾದಯಾತ್ರೆ ಆರಂಭವಾಗಲಿದೆ.
ಮೇಕೆದಾಟು ಯೋಜನೆ ರಾಜ್ಯದ ರೈತರ ಹಿತದೃಷ್ಠಿಯಿಂದ ಆಗಲೇ ಬೇಕಾದ ಬಹುಮುಖ್ಯ ಕಾರ್ಯವಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಆಡಳಿತರೂಢ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸರ್ಕಾರದ ಪರವಾಗಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಏನೇನು ಪ್ರಕ್ರಿಯೆ ನಡೆಯುತ್ತಿದೆ? ಎಂಬುದರ ಬಗ್ಗೆ ಇದುವರೆಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿಲ್ಲ.

ಡಿಕೆಶಿಗೆ ಲಾಭ ತಂದುಕೊಡಲಿರುವ ಪಾದಯಾತ್ರೆ
ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಬಗ್ಗೆ ಸಾರ್ವಜನಿಕವಾಗಿ ತೆರೆದಿಟ್ಟಿದ್ದರೆ ಬಹುಶಃ ಇವತ್ತು ಕಾಂಗ್ರೆಸ್ ಪಾದಯಾತ್ರೆ ಮಾಡುವುದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲವೇನೋ?. ಆದರೆ ಈ ವಿಚಾರದಲ್ಲಿ ಸರ್ಕಾರ ಜಾಣಮೌನ ವಹಿಸಿದೆ. ಇದರ ಹಿಂದೆ ಯಾವ ರೀತಿಯ ರಾಜಕೀಯ ಅಡಗಿದೆ? ಎಂಬುದು ಸದ್ಯ ರಹಸ್ಯವಾಗಿ ಉಳಿದಿದೆ.
ಇನ್ನು ಪಾದಯಾತ್ರೆಗೆ ಕರೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ರಾಮನಗರದ ಮಟ್ಟಿಗೆ ಮುಂದಿನ ಚುನಾವಣೆಗೆ ಈ ಪಾದಯಾತ್ರೆ ಒಂದಷ್ಟು ಲಾಭ ತಂದುಕೊಡಲಿರುವುದಂತು ಸತ್ಯ. ಜತೆಗೆ ಪಕ್ಷಕ್ಕೂ ಇದು ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿದೆ. ಪ್ರತಿಯೊಂದು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿರುವ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ.

ಮೇಕೆದಾಟು ಯೋಜನೆ ಏಕೆ ಬೇಕು?
ಹೋರಾಟವೇ ಹೊರತು ಇದರ ಹಿಂದೆ ಯಾವುದೇ ಸ್ವಾರ್ಥವಿಲ್ಲ ಎಂದು ಪಕ್ಷದ ನಾಯಕರು ಹೇಳುತ್ತಲೇ ಬರುತ್ತಿದ್ದಾರೆಯಾದರೂ ಈಗಿನ ಪರಿಸ್ಥಿತಿಯಲ್ಲಿ ಏನೇ ಮಾಡಿದರೂ ಅದು ರಾಜಕೀಯವಾಗಿಯೇ ಗೋಚರಿಸುತ್ತದೆ. ಪಾದಯಾತ್ರೆಯನ್ನು ಜೆಡಿಎಸ್ ವಿರೋಧಿಸಿರುವುದರಿಂದ ಮತ್ತು ರಾಮನಗರ ಸೇರಿದಂತೆ ಹಳೆ ಮೈಸೂರು ವ್ಯಾಪ್ತಿಯಲ್ಲಿ ಜೆಡಿಎಸ್ ಇಂದಿಗೂ ಪ್ರಬಲವಾಗಿರುವುದರಿಂದ ಎಲ್ಲೋ ಒಂದು ಕಡೆ ಕಾಂಗ್ರೆಸ್ ನಾಯಕರಿಗೆ ಭಯವಂತು ಇದ್ದೇ ಇದೆ.
ಹೀಗಾಗಿಯೇ ಮೇಕೆದಾಟು ಯೋಜನೆ ಏಕೆ ಬೇಕು ಎಂಬುದರ ಬಗ್ಗೆ ನಾಯಕರು ಜನರಿಗೆ ತಿಳಿಸಿಕೊಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ಹೇಳುವ ಪ್ರಕಾರ ಪ್ರತಿ ವರ್ಷ ಸುಮಾರು 60 ರಿಂದ 80 ಟಿಎಂಸಿ ಪ್ರಮಾಣದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆಯಂತೆ. ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಾಣದಿಂದ ತಮಿಳುನಾಡಿನ ರೈತರ ಹಿತಕಾಯುವ ಜತೆಗೆ ಹಳೇ ಮೈಸೂರು ಭಾಗದ ಎಲ್ಲಾ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಮಾತ್ರವಲ್ಲದೆ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೂ ಅವಕಾಶವಿದೆಯಂತೆ.

ಸರ್ಕಾರಗಳ ಮೇಲೆ ಒತ್ತಡ ಹೇರಲು ಪಾದಯಾತ್ರೆ
ಪ್ರತಿ ವರ್ಷ ತಮಿಳುನಾಡಿಗೆ 176 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಸಮಾನಂತರ ಜಲಾಶಯ ನಿರ್ಮಿಸದಂತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಎಲ್ಲಿಯೂ ಹೇಳಿಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ರೈತರಿಗೆ ಉಚಿತ ವಿದ್ಯುತ್ ಅನ್ನು ದಿನಪೂರ್ತಿ ನೀಡಬಹುದು ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಈ ಕುರಿತಂತೆ ಮಾತನಾಡಿರುವ ಸಂಸದ ಡಿ. ಕೆ. ಸುರೇಶ್, "ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಡಿಪಿಆರ್ ತಯಾರಿಸಿದ್ದು, ನಂತರ ಮೈತ್ರಿ ಸರ್ಕಾರದಲ್ಲಿ ಅದನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಸಲ್ಲಿಸಿತ್ತು. ಕೇಂದ್ರ ಪರಿಸರ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ನೇಮಿಸಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಈ ಯೋಜನೆಗೆ ಅನುಮತಿ ನೀಡಬೇಕು. ಈ ಯೋಜನೆಗೆ ಯಾವುದೇ ಅಡೆತಡೆಯಿಲ್ಲ, ನಾಲ್ಕೈದು ಗ್ರಾಮಗಳ 500 ಎಕರೆಯಷ್ಟು ಖಾಸಗಿ ಜಮೀನು ಹಾಗೂ ಅರಣ್ಯದ ಜಮೀನು ಮುಳುಗಡೆಯಾಗಲಿದೆ. ಈಗಾಗಲೇ ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡಲು ಜಿಲ್ಲಾಡಳಿತ ಗುರುತಿಸಿದ್ದು ಅಗತ್ಯ ತಯಾರಿ ಮಾಡಿಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.

ಈಗಿನಿಂದಲೇ ಮುಂದಿನ ಚುನಾವಣೆಗೆ ತಯಾರಿ
"ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಯೋಜನೆಗೆ ಅನುಮತಿ ನೀಡುವುದು ಬಿಜೆಪಿ ಕರ್ತವ್ಯವಾಗಿದೆ. ಆದರೆ ಬಿಜೆಪಿ ಈ ಯೋಜನೆಗೆ ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ" ಸಂಸದ ಡಿ. ಕೆ. ಸುರೇಶ್ ಹೇಳಿದ್ದಾರೆ.
ಇತ್ತೀಚೆಗಿನ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ನಾಯಕರಲ್ಲಿ ಹುರುಪು ತುಂಬಿದೆ. ಹೀಗಾಗಿ ಮುಂದಿನ 2023ರ ಚುನಾವಣೆಗೆ ತಯಾರಿಗೆ 2022ರ ಆರಂಭದಿಂದಲೇ ತಯಾರಿ ಮಾಡಿಕೊಳ್ಳಬೇಕಾಗಿರುವುದರಿಂದ ಈಗ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸುವುದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಗೆ ನಾವು ಪ್ರಬಲವಾಗಿದ್ದೇವೆ ಎಂಬ ಸಂದೇಶ ರವಾನಿಸುವುದು ಕಾಂಗ್ರೆಸ್‌ಗೆ ಜರೂರಾಗಿದೆ.












Click it and Unblock the Notifications