Operation Hasta: ತೆರೆಮರೆಯಲ್ಲಿ ಜೋರಾಗಿದೆ ಆಪರೇಷನ್ ಹಸ್ತ , ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ
ಬೆಂಗಳೂರು, ಫೆಬ್ರವರಿ 03: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಅಧಿಕಾರದಲ್ಲಿದೆ. ಕೈ ಪಾಳಯದಲ್ಲಿ ಬರೋಬ್ಬರಿ 138 ಶಾಸಕರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನ ಇನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ನ ಐದರಿಂದ ಏಳು ಮಂದಿ ಹಳೇ ಮೈಸೂರು ಭಾಗದ ಶಾಸಕರನ್ನ ಸೆಳೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ನಾಯಕರು ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರನ್ನ ಈಗಾಗಲೇ ಸಂಪರ್ಕ ಮಾಡಿದ್ದು, ಕಾಂಗ್ರೆಸ್ ಕರೆತರುವ ಪಯತ್ನ ನಡೆಯುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ತಂತ್ರಗಾರಿಕೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕದಲ್ಲಿ ಎಂಬ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಕೆಪಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾನು ಜೆಡಿಎಸ್ ಶಾಸಕರ ವಿಚಾರವಾಗಿ ಮಾತನಾಡಿಲ್ಲ, ಜೆಡಿಎಸ್ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ತಾವು ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದೇನೆ. ಆ ಕಾರ್ಯಕರ್ತರು ಕೂಡ ಎಷ್ಟು ದಿನ ಎಂದು ಕಾಯಲು ಸಾಧ್ಯ? ಅವರಿಗೂ ಜಾತ್ಯಾತೀತ ಸಿದ್ಧಾಂತದ ರಾಷ್ಟ್ರೀಯ ಪಕ್ಷದ ಅಗತ್ಯವಿದೆ. ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ನಿಮ್ಮ ಪಕ್ಷ ಸೇರಲು ಮುಂದೆ ಬಂದರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಉತ್ತರಿಸಿ, ಆ ವಿಚಾರ ಮುಂದೆ ನೋಡೋಣ. ನಾನು ಅದರ ಬಗ್ಗೆ ಆಲೋಚನೆ ಮಾಡಿಲ್ಲ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ನಾನು ಯಾರ ಜತೆಗೂ ಮಾತನಾಡಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಲಿಗೆಯಿಂದ ಒಂದು ಮಾತು ಬಂದರೆ ಅದನ್ನು ಉಳಿಸಿಕೊಂಡು, ಅದರಂತೆ ನಡೆಯಬೇಕು. ಇದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಅವರು ಮೊದಲು ತಮ್ಮ ಮಾತನ್ನು ಉಳಿಸಿಕೊಳ್ಳಲಿ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ನಮ್ಮ ಸರ್ಕಾರ ಪತ್ರಕರ್ತರಿಗೆ ನೀಡಿರುವ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ ಮಾಡಲಾಗಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಲು ಚರ್ಚೆ ನಡೆಯುತ್ತಿದೆ. ಗ್ರಾಮೀಣ ಹಾಗೂ ನಗರ ಭಾಗದ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಪತ್ರಕರ್ತರು ಗೌರವಯುತವಾಗಿ ಬದುಕಲು ಈ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಹಂಚಿಕೆ ಸಂದರ್ಭದಲ್ಲಿ ಬೇರೆಯವರಿಗೆ ನೀಡುವಂತೆ ಮಾಧ್ಯಮದವರಿಗೂ ಆದ್ಯತೆ ನೀಡಲು ಚರ್ಚೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಘೋಷಣೆ ಮಾಡುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ, ವಿವಿಧ ಯೋಜನಾ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡವನಾಗಿ ನಾನು ಈ ಭರವಸೆ ನೀಡುತ್ತಿದ್ದೇನೆ ಎಂದು ತಿಳಿಸಿದರು.












Click it and Unblock the Notifications