
ನೀರಾವರಿ ನಿರ್ಲಕ್ಷಿಸಿದ ನಿರಾಶಾದಾಯಕ ಬಜೆಟ್: ಎಸ್.ಆರ್. ಪಾಟೀಲ್
ಬೆಂಗಳೂರು, ಮಾರ್ಚ್ 8: ವಿಧಾನಸಭೆಯಲ್ಲಿಂದು ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವ ಬಿ.ಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಕರ್ನಾಟಕ ಆಯವ್ಯಯ ಪತ್ರ ಮಂಡನೆ ಮಾಡಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿ, ಸದನದಿಂದ ಹೊರ ನಡೆದರು. ಬಜೆಟ್ ಭಾಷಣದ ಬಳಿಕ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದು, ಇದು ನಿರಾಶಾದಾಯಕ ಬಜೆಟ್ ಎನ್ನುತ್ತಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ಪ್ರತಿಕ್ರಿಯಿಸಿ, ಸಿಎಂ ಮಂಡಿರುವ ಬಜೆಟ್‌ನಲ್ಲಿ ಯಾವುದೇ ಯೋಜನೆ, ಘೋಷಣೆ ಕಂಡು ಬಂದಿಲ್ಲ. ''ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ'' ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಇದು ನಿರಾಶಾದಾಯಕ ಬಜೆಟ್ ಎಂದಿದ್ದಾರೆ.
ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್ನಿಂದ ತೆರಿಗೆ ಹೊರೆ ಇಲ್ಲ
ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿದೆ
ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ, ಗ್ರಾಮೀಣಾಭಿವೃದ್ಧಿ ಹೆಚ್ಚಿನ ಮೊತ್ತ ಸಿಕ್ಕಿಲ್ಲ, 31ನೇ ಜಿಲ್ಲೆಯಾದ ವಿಜಯನಗರಕ್ಕೆ ಒಂದು ರೂಪಾಯಿ ಹಣ ಮೀಸಲಿಟ್ಟಿಲ್ಲ, ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿದ್ದು, ಕೇವಲ ಇದು ಭಾಷಣದ ಬಜೆಟ್ ಆಗಿದೆ ಎಂದರು.
''ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತಿವಿ ಅಂತ ಹೇಳಿರೋದನ್ನೇ ಬಜೆಟ್‌ನಲ್ಲಿ ಸಿಎಂ ಹೇಳಿದ್ದಾರೆ, ಆದ್ರೆ ಹಣವನ್ನೇ ನೀಡಿಲ್ಲ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಪೂರಕವಾಗಿಲ್ಲ, ಇದೊಂದು ಜನ ವಿರೋಧಿ ಸರ್ಕಾರ, ಜನ ವಿರೋಧಿ ಬಜೆಟ್, ಸಮಾಜದ ಎಲ್ಲಾ ವರ್ಗದವರಿಗೂ ಇದು ನಿರಾಶದಾಯಕ ಬಜೆಟ್"ಎಂದು ಹೇಳಿದರು.
ಪ್ರತಿಭಟನೆ ಏಕೆ?
ಯಡಿಯೂರಪ್ಪನವರದ್ದು ಜನ ಪರ ಸರ್ಕಾರವಲ್ಲ ಇದು, ಸಿ ಡಿ ಸರ್ಕಾರ, ಬಜೆಟ್ ಮಾಡುವ ಅರ್ಹತೆ, ನೈತಿಕತೆ ಈ ಸರ್ಕಾರಕ್ಕೆ ಇಲ್ಲ ಹೀಗಾಗಿ, ಬಜೆಟ್ ಮಂಡನೆ ಮಾಡಬಾರದು ಎಂದು ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದ್ದೇವೆ. ಸರ್ಕಾರದ ವಿರುದ್ಧ ಮೇಲ್ಮೆನೆ, ಕೆಳಮನೆಯಲ್ಲಿ ಪ್ರತಿಭಟನೆ ಮಾಡಿದ್ದೇವೆ ಎಂದರು.