ಕೂಸಿಗೆ ಮುನ್ನವೇ ಕುಲಾವಿ: ಎಕ್ಸಿಟ್ ಪೋಲ್ ನಂಬಿ ಡಿಕೆಶಿ ಗೋವಾಗೆ, ಪಾಟೀಲ್ ಉತ್ತರಾಖಾಂಡಿಗೆ
ದೇಶದ ಜನತೆಯಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಫಲಿತಾಂಶ ಮಾರ್ಚ್ ಹತ್ತರಂದು ಹೊರಬೀಳಲಿದೆ. ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಚುನಾವಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್, ಚುನಾವಣೋತ್ತರ ಸಮೀಕ್ಷೆ) ಇತ್ತೀಚಿನ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕೆಲವೊಂದು ಸಮೀಕ್ಷೆಗಳು ಅಸಲಿ ಫಲಿತಾಂಶದ ಹತ್ತಿರಕ್ಕೂ ಬರದಿದ್ದರೂ, ರಾಜಕೀಯ ಲೆಕ್ಕಾಚಾರಗಳು ಇಲ್ಲಿಂದಲೇ ಆರಂಭವಾಗುತ್ತದೆ.
ಎಕ್ಸಿಟ್ ಪೋಲ್ ಪ್ರಕಾರ ಎರಡು ರಾಜ್ಯಗಳಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ, ಅದು ಗೋವಾ ಮತ್ತು ಉತ್ತರಾಖಂಡ. ಈ ಫಲಿತಾಂಶವನ್ನು ಆಧರಿಸಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸರಕಾರ ರಚನೆಗೆ ಕಸರತ್ತನ್ನು ಆರಂಭಿಸಿದ್ದಾರೆ.
ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಆದರೆ, ಗೋವಾ ಮತ್ತು ಉತ್ತರಾಖಂಡ್ ನಲ್ಲಿ ಹಾಗಲ್ಲ. ಅದರಿಂದಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಈಗಲೇ ಆಖಾಡಕ್ಕೆ ಇಳಿದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಹಿರಿಯ ಮುಖಂಡ ಎಂ.ಬಿ.ಪಾಟೀಲ್ ಅವರಿಗೆ ಹೈಕಮಾಂಡ್ ತುರ್ತು ಬುಲಾವ್ ಕಳುಹಿಸಿದೆ.

ಗೋವಾ ಮತ್ತು ಉತ್ತರಾಖಂಡದ ಸಮೀಕ್ಷೆ
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಪಂಜಾಬ್ ಬಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಇನ್ನು, ಗೋವಾ ಮತ್ತು ಉತ್ತರಾಖಂಡದಲ್ಲಿ, ಸಮೀಕ್ಷೆ ನಡೆಸಿದ ಎಲ್ಲಾ ವಾಹಿನಿಗಳು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ನೇರ ಪೈಪೋಟಿ ನಡೆಯಲಿದ್ದು, ಬಿಜೆಪಿಗೆ 15-22, ಕಾಂಗ್ರೆಸ್ಸಿಗೆ 9-18ಸ್ಥಾನದ ಫಲಿತಾಂಶವನ್ನು ನೀಡಿದೆ. ಗೋವಾ ನಲವತ್ತು ಸ್ಥಾನವನ್ನು ಹೊಂದಿದೆ. ಇನ್ನು, ಉತ್ತರಾಖಂಡದಲ್ಲಿ ಬಿಜೆಪಿಗೆ 26-43, ಕಾಂಗ್ರೆಸ್ಸಿಗೆ 24-38ಸ್ಥಾನದ ಬಗ್ಗೆ ಫಲಿತಾಂಶ ನೀಡಿದೆ. ಉತ್ತರಾಖಂಡ ಅಸೆಂಬ್ಲಿ ಎಪ್ಪತ್ತು ಸದಸ್ಯ ಬಲವನ್ನು ಹೊಂದಿದೆ. ಹಾಗಾಗಿ, ಡಿಕೆಶಿ ಮತ್ತು ಎಂ.ಬಿ.ಪಾಟೀಲ್ ಅವರನ್ನು ಆಖಾಡಕ್ಕೆ ಇಳಿಯುವಂತೆ ಸೂಚಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗೋವಾಗೆ ಕಳುಹಿಸಿದ ಹೈಕಮಾಂಡ್
ಗೋವಾ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಹತ್ತಿರ ಬರಬಹುದು ಎನ್ನುವ ಸಮೀಕ್ಷೆಯ ನಂತರ ಕಾಂಗ್ರೆಸ್ ಮುಖಂಡರು ಚುರುಕುಗೊಂಡಿದ್ದಾರೆ. ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನವೇ ಸರಕಾರ ರಚಿಸುವ ಕಾರ್ಯತಂತ್ರ ಹಣೆಯಲು ಆರಂಭಿಸಿದೆ. ಈ ನಿಟ್ಟಿನಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗೋವಾಗೆ ಮತ್ತು ಹಿರಿಯ ಸಚಿವ/ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರನ್ನು ಉತ್ತರಾಖಂಡಿಗೆ ಕಳುಹಿಸಲಾಗಿದೆ.

ಆ ತಪ್ಪು ಈ ಬಾರಿ ಆಗದಂತೆ ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್
ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಗೋವಾ ಚುನಾವಣೆ ಮುಗಿಯುವವರೆಗೆ ಅಲ್ಲೇ ಬೀಡು ಬಿಟ್ಟಿದ್ದ ದಿನೇಶ್ ಗುಂಡೂರಾವ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರನ್ನೂ ಗೋವಾಗೆ ಹೈಕಮಾಂಡ್ ಕಳುಹಿಸಿದೆ. ಕಳೆದ ಬಾರಿ ಅಧಿಕಾರದ ಹಂತಕ್ಕೆ ಬಂದಿದ್ದರೂ ಸರಕಾರ ರಚಿಸುವಲ್ಲಿ ಕಾಂಗ್ರೆಸ್ ಎಡವಿತ್ತು. ಆ ತಪ್ಪು ಈ ಬಾರಿ ಆಗದಂತೆ ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್, ರೆಸಾರ್ಟ್ ರಾಜಕೀಯ ಆರಂಭಿಸಿದೆ.

ತಂಡಕ್ಕೆ ಎಂ.ಬಿ.ಪಾಟೀಲ್ ಕೂಡಾ ಸೇರಿಕೊಂಡಿದ್ದಾರೆ
ಗೋವಾ ಮತ್ತು ಉತ್ತರಾಖಂಡ್ ನಲ್ಲಿ ಸರಕಾರ ರಚಿಸಲು ಸೂಕ್ತ ಕಾರ್ಯತಂತ್ರವನ್ನು ರೂಪಿಸಲು ಹೈಕಮಾಂಡ್ ತಂಡವನ್ನು ರಚಿಸಿದೆ. ಈ ತಂಡಕ್ಕೆ ಎಂ.ಬಿ.ಪಾಟೀಲ್ ಕೂಡಾ ಸೇರಿಕೊಂಡಿದ್ದಾರೆ. "ನಮ್ಮ ಪಕ್ಷ ಅಧಿಕಾರಕ್ಕೆ ಬರಲು ನಾನೂ ಗೋವಾಗೆ ತೆರಳಿದ್ದೆ, ನಮ್ಮ ತಂಡ ಒಂದು ತಿಂಗಳಿನಿಂದ ಪರಿಶ್ರಮ ವಹಿಸಿದೆ. ಈಗ, ತಂಡಕ್ಕೆ ಬೆಂಬಲವಾಗಿ ನಿಲ್ಲಲು ಮತ್ತು ತಂಡವನ್ನು ಸೇರಿಕೊಳ್ಳಲು ಹೈಕಮಾಂಡ್ ಸೂಚಿಸಿದೆ. ಅದರಂತೇ ಅಲ್ಲಿಗೆ ಹೋಗುತ್ತಿದ್ದೇನೆ"ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದರು.












Click it and Unblock the Notifications