Karnataka bandh: ಪಿಯುಸಿ ಪರೀಕ್ಷೆ ಹಿನ್ನೆಲೆ, ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ವಾಪಸ್
ಮಕ್ಕಳ ಪರೀಕ್ಷೆಯ ಹಿತ ನಮ್ಮ ಆದ್ಯತೆ. ಹೀಗಾಗಿ ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಬಂದ್ ಕರೆ ವಾಪಸ್ ಪಡೆಯಲು ತೀರ್ಮಾನಿಸಿದೆ.
ಬೆಂಗಳೂರು,ಮಾರ್ಚ್ 8: ವಿಧಾನಸಭಾ ಚುನಾವಣೆಗೆ ದಿನಗಣನೆಗೆ ಶುರುವಾಗಿದ್ದು, ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಗುರುವಾರ ಬಂದ್ ಗೆ ಕರೆ ಕೊಟ್ಟಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ರಾಜ್ಯಾದ್ಯಂತ ಶಾಲಾ- ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂದ್ ನ ಹಿಂಪಡೆಯಲು ನಿರ್ಧಾರಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್ ಅನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಗುರುವಾರ ಬೆಳಗ್ಗೆ 9 ರಿಂದ 11 ಗಂಟೆಯ ವರೆಗೆ ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ ನೀಡಿತ್ತು. ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆ ಹಿನ್ನೆಲೆ, ಕಾಂಗ್ರೆಸ್ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮಾರ್ಚ್ ರ ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ಎರಡು ಗಂಟೆಗಳ ಕಾಲ ಸಾಂಕೇತಿಕ ಬಂದ್ ಮಾಡಲು ಕಾಂಗ್ರೆಸ್ ನಿರ್ಧರಿಸಿತ್ತು.ಆದರೆ, ಪರೀಕ್ಷೆಗಳು ಇರುವ ಕಾರಣ ಬಂದ್ ನಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮಕ್ಕಳ ಪರೀಕ್ಷೆಯ ಹಿತ ನಮ್ಮ ಆದ್ಯತೆ. ಹೀಗಾಗಿ ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಬಂದ್ ಕರೆ ವಾಪಸ್ ಪಡೆಯಲು ತೀರ್ಮಾನಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.












Click it and Unblock the Notifications