ಸಿದ್ದರಾಮಯ್ಯ ರಾಜೀನಾಮೆ ನೀಡದಿರಲು ಕಾರಣ ಕೊಟ್ಟ ಕಾಂಗ್ರೆಸ್, ಏನದು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್‌ನಲ್ಲಿ ಮುಖಭಂಗವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನೇ ಕೋರ್ಟ್ ಎತ್ತಿ ಹಿಡಿದಿದ್ದು, ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ಸಿದ್ದರಾಮಯ್ಯ ಅವರು ಯಾಕೆ ರಾಜೀನಾಮೆ ಕೊಡುವುದಿಲ್ಲ ಎಂದು ಕಾರಣಗಳನ್ನು ಕೊಟ್ಟಿದೆ.
ಈ ಬಗ್ಗೆ ಟ್ವೀಟ್‌ನಲ್ಲಿ, ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಬಿಜೆಪಿ ನಾಯಕರೇ, ನಿಮಗಿದು ತಿಳಿದಿರಲಿ...ಎಂದು ಪಟ್ಟಿ ಹಂಚಿಕೊಂಡಿದೆ. ಸಿದ್ದರಾಮಯ್ಯನವರು ಚೆಕ್ ಮೂಲಕ ಲಂಚ ಪಡೆದಿಲ್ಲ. ಸಿದ್ದರಾಮಯ್ಯನವರು ಕಮಿಷನ್‌ಗೆ ಪೀಡಿಸಿ ಯಾವುದೇ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣವಾಗಿಲ್ಲ. ಸಿದ್ದರಾಮಯ್ಯನವರು ಅಪ್ರಾಪ್ತ ಹೆಣ್ಣುಮಗಳಿಗೆ ದೌರ್ಜನ್ಯ ಎಸಗಿ ಪೋಕ್ಸೋ ಕೇಸ್ ಹಾಕಿಸಿಕೊಂಡಿಲ್ಲ ಎಂದು ಬಿಜೆಪಿ ನಾಯಕರ ಮೇಲಿರುವ ಆರೋಪಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯನವರು ಹೆಣಗಳ ಮೇಲೆ ಹಣ ಮಾಡಿಲ್ಲ. ಸಿದ್ದರಾಮಯ್ಯನವರು ಶಾಲೆ ಕಟ್ಟಿಸುತ್ತೇನೆ ಎಂದು KIADB ನಿವೇಶನ ಪಡೆದು ಬಿರಿಯಾನಿ ಹೋಟೆಲ್ ಸಹ ನಡೆಸುತ್ತಿಲ್ಲ. ಸಿದ್ದರಾಮಯ್ಯನವರು ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡು ಯಾವುದೇ ಭೂಮಿ ಕೊಳ್ಳೆ ಹೊಡೆದಿಲ್ಲ. ಸಿದ್ದರಾಮಯ್ಯನವರು ಅಕ್ರಮವಾಗಿ ಗಣಿ ಗುತ್ತಿಗೆ ನೀಡಿಲ್ಲ. ಸಿದ್ದರಾಮಯ್ಯನವರು ಸಿಡಿಗೆ ತಡೆಯಾಜ್ಞೆ ತಂದಿಲ್ಲ. ಈ ಎಲ್ಲ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರಿಗೆ ಸಿದ್ದರಾಮಯ್ಯನವರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದೆ.
ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವ ರಾಜ್ಯ ಕಾಂಗ್ರೆಸ್ ಸಹ ಬಿಜೆಪಿ ನಾಯಕರ ಆರೋಪಗಳಿಗೆ ಟಕ್ಕರ್ ನೀಡುತ್ತಿದೆ. ಸುಳ್ಳೇ ಬಿಜೆಪಿಯ ಮನೆದೇವರು ಎನ್ನುವುದನ್ನು ಪದೆ ಪದೆ ಸಾಬೀತು ಮಾಡುತ್ತಿದ್ದಾರೆ ಎಂದು ದೂರಿದೆ.
ಮುಡಾ ನಿವೇಶನ ಪ್ರಕರಣದಲ್ಲಿ ಅಕ್ರಮವಾಗಿದ್ದರೆ ತನಿಖೆ ಎದುರಿಸಬೇಕಾಗಿರುವುದು ಮುಡಾ, ಅದರ ಅಧಿಕಾರಿಗಳೇ ಹೊರತು ಸಿಎಂ ಸಿದ್ದರಾಮಯ್ಯ ಅವರಲ್ಲ ಎಂದು ಹೇಳಿದೆ. ದೂರಿನಲ್ಲಿ ಪಾರ್ಟಿಯಾಗಬೇಕಾಗಿರುವುದು ಮುಡಾ. ಆದರೆ ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ದೂರು ನೀಡಲಾಗಿದೆ. ಇದು ರಾಜಕೀಯ ದುರುದ್ದೇಶವಲ್ಲದೆ ಇನ್ನೇನೂ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ.

ರಾಜಕೀಯ ಪ್ರೇರಿತ ಪ್ರಕರಣವನ್ನು ಎದುರಿಸುವುದು ನಮಗೂ ತಿಳಿದಿದೆ. ಕಾಂಗ್ರೆಸ್ ನಾಯಕರನ್ನು ಯಾವುದರಲ್ಲೂ ಮಣಿಸಲು ಸಾಧ್ಯವಾಗದಾಗ ಕಾನೂನಿನ ಕುಣಿಕೆ ಹಾಕುವುದು ಬಿಜೆಪಿಯ ಷಡ್ಯಂತ್ರದ ಭಾಗ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಕಾನೂನಿನ ಮೂಲಕ ಹಣಿಯುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ, ಈಗ ಸಿದ್ದರಾಮಯ್ಯ ಅವರ ವಿರುದ್ಧದ ತಂತ್ರಗಳೂ ವಿಫಲವಾಗಲಿದೆʼ ಎಂದು ತಿರುಗೇಟು ನೀಡಿದೆ.
ʼನಮ್ಮ ಹೋರಾಟ ಮುಂದುವರೆಯಲಿದೆ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯಪಾಲರ ಪ್ರಯತ್ನಕ್ಕೆ, ಬಿಜೆಪಿಯ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ. ಈ ಬಗ್ಗೆ ದೂರುಗಳು ಹೇಗೆ ಸೋರಿಕೆಯಾದವು? ಎಂದು ರಾಜ್ಯಪಾಲರ ಪ್ರಶ್ನೆಯೇ ಅವರ ತಾರತಮ್ಯದ ರಾಜಕೀಯಕ್ಕೆ ಪುರಾವೆ ಒದಗಿಸುತ್ತವೆ ಎಂದು ವಾಗ್ದಾಳಿ ಕೂಡ ನಡೆಸಿದೆ.












Click it and Unblock the Notifications