5 Guarantee Scheme: ಯೋಜನೆ ಜಾರಿ ನಿರ್ಧಾರ ಸಿಎಂಗೆ ಬಿಟ್ಟ ಸಚಿವರು, ಜೂ.2ಕ್ಕೆ ಸಂಪುಟ ಸಭೆ
ಬೆಂಗಳೂರು, ಮೇ 31: ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದೇ ಸವಾಲಾಗಿ ಪರಣಮಿಸಿದೆ. ಬುಧವಾರ ಮಧ್ಯಾಹ್ನ ಯೋಜನೆ ಜಾರಿ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಡಲಾಗಿದೆ.
200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮೀ ಯೋಜನೆ, ನಿರುದ್ಯೋಗಿಗಳಿಗೆ ಆರ್ಥಿಕ ನೆರವು, ಉಚಿತ ಪಡಿತರ ವಿತರಣೆಯ ಐದು ಗ್ಯಾರಂಟಿ ಕುರಿತು ಇಂದು ಮಹತ್ವದ ಚರ್ಚೆಗಳು ನಡೆದಿವೆ. ಈ ಕುರಿತು ಇನ್ನಷ್ಟು ಚರ್ಚೆಗಳನ್ನು ಮುಂದಿನ ಸಂಪುಟ ಸಭೆಯಲ್ಲಿ ನಡೆಸಿ ಬಳಿಕ ನಿರ್ಣಯಿಸುವ ಬಗ್ಗೆ ಸರ್ಕಾರದ ಪ್ರತಿನಿಧಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸದ್ಯ ಸಚಿವ ಸಂಪುಟ ಸಭೆಯನ್ನು ನಾಡಿದ್ದು ಜೂನ್ 2ರಂದು ಶುಕ್ರವಾರಕ್ಕೆ ಮುಂದೂಡಲಾಗಿದೆ. ಇನ್ನೂ ಐದು ಗ್ಯಾರಂಟಿಗಳ ಜಾರಿಯ ಪರಮಾಧಿಕಾರವನ್ನು ಎಲ್ಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ಪಕ್ಕಾ, ಇದರಲ್ಲಿ ಅನುಮಾನ ಇಲ್ಲ. ಈ ಬಗ್ಗೆ ಇನ್ನಷ್ಟು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಯೋಜನೆಗಳ ಜಾರಿಯ ಕುರಿತು ಚರ್ಚೆ ಮಾಡುತ್ತೇವೆ. ಇಂದಿನ ಸಭೆಯಲ್ಲಿ ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿಲ್ಲ. ಸದ್ಯ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಯೋಜನೆ ಜಾರಿ ಬಗ್ಗೆ ಶುಕ್ರವಾರ ತೆರೆ ಬೀಳುತ್ತಾ?
ಐದು ಗ್ಯಾರಂಟಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಬುಧವಾರ ವರದಿ ಸ್ವೀಕರಿಸಿದ್ದಾರೆ. ಈ ಕುರಿತು ಸ್ಪಷ್ಟ ನಿರ್ಧಾರವಾಗಲಿ ಏನು, ಜಾರಿ ಯಾವಾಗ ಎಂಬೆಲ್ಲ ಗೊಂದಲಗಳಿಗೆ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಯೋಜನೆಗಳ ಜಾರಿಗೆ ಸಾಕಷ್ಟು ಹಣ ಬೇಕಾಗಿದೆ. ಅಲ್ಲದೆ ನೀಡಿದ ಭರವಸೆ ಈಡೇರಿಕೆಯಿಂದಾಗಿ ಸಾಧಕ-ಬಾಧಕ ಕುರಿತು ತೀವ್ರ ಚರ್ಚೆ ನಡೆಯುತ್ತಲೇ ಇದೆ. ಹೊರತು ಅನುಷ್ಠಾನಕ್ಕೆ ಸರ್ಕಾರದಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿಯೇ ಸಂಪುಟ ಸಭೆ ಮತ್ತೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ಮುನ್ನ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಮತ್ತೆ ಸಭೆ ನಡೆಸುವ ಸಾಧ್ಯತೆಯೂ ಇದೆ.
ಈ ಗೊಂದಲಗಳ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ರಾಜ್ಯ ಸರ್ಕಾರ ಯಾವುದೇ ಷರತ್ತುಗಳಿಲ್ಲದೆ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಬಹುದು ಎಂದು ಸುಳಿವು ನೀಡಿದ್ದಾರೆ. ಇತ್ತ ಸರ್ಕಾರ ರಚನೆಯಾದರೂ ಕಾಂಗ್ರೆಸ್ ನುಡಿದಂತೆ ಯೋಜನೆಗಳನ್ನು ಜಾರಿ ಮಾಡದೇ ವಿಳಂಬ ಮಾಡುತ್ತಿದೆ ಎಂದು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಟೀಕಿಸುತ್ತಿದೆ.












Click it and Unblock the Notifications