'ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡ ಬಯಲು': ವಿಜಯೇಂದ್ರ ಗುಡುಗಿದ್ದೇಕೆ?
ಬೆಂಗಳೂರು, ಫೆಬ್ರವರಿ 18: ವಿಶ್ವ ಗಾಣಿಗ ಸುಮುದಾಯದ ಟ್ರಸ್ಟ್‌ಗೆ ಅನುದಾನ ಬಿಡುಗಡೆಯಲ್ಲಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಾರತಮ್ಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಮತ ಗಳಿಕೆ ಹಾಗೂ ಅಧಿಕಾರ ಗಳಿಸಲು ಮಾತ್ರ ಹಿಂದುಳಿದವರ ಜಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೂ ಹಿಂದುಳಿದ ಸಮುದಾಯಗಳಿಗೆ ಮಹತ್ವದ ಕೊಡುಗೆ ಕೊಟ್ಟ ಯಾವ ಉದಾಹರಣೆಯೂ ಇಲ್ಲ, ಅದರಲ್ಲೂ ಅತಿ ಹಿಂದುಳಿದ ಕಾಯಕ ಸಮುದಾಯಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂದು ಆರೋಪಿಸಿದರು.

ಅತಿ ಹಿಂದುಳಿದ ಗಾಣಿಗ ಸಮುದಾಯದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಗೆ ನಿಗದಿಯಾಗಿರುವ ಅನುದಾನವನ್ನು ತಡೆ ಹಿಡಿಯುವ ಮೂಲಕ ಹಿಂದುಳಿದವರ ಕಲ್ಯಾಣ ಕಾರ್ಯ ಹಾಗಿರಲಿ, ಅವರಿಗೆ ನೀಡುವ ಅನುದಾನಕ್ಕೂ ಕತ್ತರಿ ಪ್ರಯೋಗವಾಗುತ್ತಿರುವುದು ವಿಪರ್ಯಾಸವೇ ಸರಿ.
ಅತೀ ಹಿಂದುಳಿದ ಕಾಯಕ ಶ್ರೇಷ್ಠ ಸಮಾಜವಾಗಿರುವ ಗಾಣಿಗ ಸಮಾಜಕ್ಕೆ ಸೇರಿದ ತೈಲೇಶ್ವರ ಗಾಣಿಗ ಸಮಾಜದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಡೆ ಹಿಡಿದು ತೊಂದರೆ ಕೊಡುತ್ತಿರುವುದು ಸಾಮಾಜಿಕ ನ್ಯಾಯ ಪಠಿಸುವ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಬಯಲು ಮಾಡಿದೆ ಎಂದರು.

ಪರಮಪೂಜ್ಯ ಪೂರ್ಣಾನಂದಪುರಿ ಸ್ವಾಮೀಜಿಗಳು ಪೂರ್ವಾಶ್ರಮದಲ್ಲಿ ಮಾಜಿ ಸಚಿವರಾಗಿದ್ದವರು, ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ಸಮಾಜಗಳಿಗಾಗಿ ಪರಿಶ್ರಮಿಸಿದವರು, ಇದೀಗ ಸರ್ವಸಂಗ ಪರಿತ್ಯಾಗಿಗಳಾಗಿ ಸನ್ಯಾಸತ್ವ ಸ್ವೀಕರಿಸಿ ಗಾಣಿಗ ಸಮುದಾಯದ ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಗತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಶ್ರೀಮಠ ಅಭಿವೃದ್ಧಿಪಡಿಸಲು ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದಾರೆ.
ಇಂತಹ ನೈಜ ಕಾಳಜಿಯುಳ್ಳ ಪೂಜ್ಯ ಶ್ರೀಗಳ ಕೋರಿಕೆಯನ್ನು ಅಲಕ್ಷಿಸುತ್ತಿರುವ ಈ ಸರ್ಕಾರ ಘೋಷಣೆ ಮಾಡಿರುವ ಅನುದಾನವನ್ನೂ ಬಿಡುಗಡೆ ಮಾಡದೆ ಕಿರುಕುಳ ನೀಡುತ್ತಿರುವುದು ನೋಡಿದರೆ ಅತಿ ಹಿಂದುಳಿದ ಕಾಯಕ ಸಮುದಾಯಗಳನ್ನು ಅಪಮಾನಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಂತೆ ಕಾಣುತ್ತಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಶೋಷಣೆಯಾಗುತ್ತಿರುವ ಪರಿ 'ಅಹಿಂದ ಎನ್ನುವುದು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ಅಸ್ತ್ರವಾಗಿದೆ ಎಂಬ ವಾಸ್ತವ ಅಸಂಘಟಿತ ಹಿಂದುಳಿದ ವರ್ಗಗಳಿಗೆ ಮನನವಾಗುತ್ತಿದೆ. ಈ ಕೂಡಲೇ ತಡೆ ಹಿಡಿದಿರುವ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಬಿ.ವೈ ವಿಜಯೇಂದ್ರ ಒತ್ತಾಯಿಸಿದ್ದಾರೆ.












Click it and Unblock the Notifications