ಕಾಂಗ್ರೆಸ್ ಪಟ್ಟಿ; ಚುನಾವಣಾ ಸಮಿತಿ ಸಭೆ ಅಪೂರ್ಣ!
ಬೆಂಗಳೂರು, ಏಪ್ರಿಲ್ 05; ಕೇಂದ್ರ ಚುನಾವಣಾ ಆಯೋಗ 2023ರ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಆದರೆ ಇನ್ನೂ 100 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡುವುದು ಬಾಕಿ ಇದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ 10ರಂದು ಮತದಾನ, 13ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ದೆಹಲಿಯಲ್ಲಿ ಮಂಗಳವಾರದಿಂದ ಸಭೆ ನಡೆಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.

ಮಂಗಳವಾರ ಎರಡು ಬಾರಿ ಸಭೆ ನಡೆಸಿದಾಗಲೂ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಸಾಧ್ಯವಾಗಲಿಲ್ಲ. ಸುಮಾರು 40 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಬುಧವಾರ ಸಹ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಅಪೂರ್ಣಗೊಂಡಿದೆ. ಆದ್ದರಿಂದ ಏಪ್ರಿಲ್ 6ರ ಗುರುವಾರಕ್ಕೆ ಸಭೆ ಮುಂದೂಡಲಾಗಿದೆ.
ಗುರುವಾರ ಮಧ್ಯಾಹ್ನ 2.30ಕ್ಕೆ ಎಐಸಿಸಿ ಕಚೇರಿಯಲ್ಲಿ ಮತ್ತೆ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಒಮ್ಮತ ಮೂಡಿದರೆ. ರಾತ್ರಿಯೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಎರಡು ದಿನದಿಂದ ವಿವಿಧ ನಾಯಕರು ದೆಹಲಿಯಲ್ಲಿದ್ದು, ರಾಜ್ಯದಲ್ಲಿನ ಚುನಾವಣಾ ಕಾರ್ಯಗಳು ಬಾಕಿ ಉಳಿದಿವೆ.

ಪಟ್ಟಿಗೆ ಮೂಡದ ಒಮ್ಮತ; ಮಂಗಳವಾರ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ಸುಮಾರು ನಾಲ್ಕೂವರೆ ತಾಸು ನಡೆದಿತ್ತು. ಟಿಕೆಟ್ ಆಕಾಂಕ್ಷಿಗಳ ಒಂದೇ ಹೆಸರು ಇರುವ 49 ಕ್ಷೇತ್ರಗಳ ಪಟ್ಟಿಗೆ ಸಭೆ ಅನುಮೋದನೆ ನೀಡಿದೆ. ಆದರೆ ಉಳಿದ ಕ್ಷೇತ್ರಗಳ ಆಯ್ಕೆ ಕಗ್ಗಂಟಾಗಿದೆ. ಒಂದೇ ಹೆಸರು ಅಂತಿಮಗೊಳಿಸಿಕೊಂಡು ಬುಧವಾರ ಮತ್ತೆ ಬನ್ನಿ ಎಂದು ರಾಜ್ಯದ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದರು. ಆದರೆ ಬುಧವಾರವೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಸಭೆಯಲ್ಲಿ ಸಾಧ್ಯವಾಗಿಲ್ಲ.
'ಚುನಾವಣಾ ನೀತಿ ಸಂಹಿತೆ ಘೋಷಣೆಗೂ ಮೊದಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದೇವೆ. 2ನೇ ಪಟ್ಟಿಯನ್ನು ಇಂದೇ ಪ್ರಕಟಿಸುತ್ತೇವೆ. ಶೇ 70ರಷ್ಟು ಕ್ಷೇತ್ರಗಳ ಪ್ರಕ್ರಿಯೆ ಪೂರ್ಣಗೊಂಡಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದರು. ಆದರೆ ಮಂಗಳವಾರ ಪಟ್ಟಿ ಅಂತಿಮವಾಗಿಲ್ಲ. ಗುರುವಾರದ ಸಭೆಯ ಬಳಿಕವಾದರೂ ಪಟ್ಟಿ ಅಂತಿಮವಾಗಲಿದೆಯೇ? ಕಾದು ನೋಡಬೇಕಿದೆ.
ಮೋಹನ್ ಪ್ರಕಾಶ್ ನೇತೃತ್ವದ ಪರಿಶೀಲನಾ ಸಮಿತಿ ಹಲವು ಸುತ್ತಿನಸಭೆ ಬಳಿಕ 60 ಕ್ಷೇತ್ರಗಳಿಗೆ ತಲಾ ಒಬ್ಬ ಅಭ್ಯರ್ಥಿಯನ್ನು ಮಾತ್ರ ಶಿಫಾರಸು ಮಾಡಿತ್ತು. 32 ಕ್ಷೇತ್ರಗಳಿಗೆ ಇಬ್ಬರು, 7 ಕ್ಷೇತ್ರಗಳಿಗೆ ನಾಲ್ವರ ಹೆಸರು ಶಿಫಾರಸು ಮಾಡಿತ್ತು. ಆದರೆ ಕಡೂರು, ಚಿತ್ರದುರ್ಗ, ತರೀಕೆರೆ ಸೇರಿ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ತೀರ್ಥಹಳ್ಳಿ ಸೇರಿದಂತೆ ಸಣ್ಣಪುಟ್ಟ ಗೊಂದಲಗಳಿದ್ದ ಕ್ಷೇತ್ರಗಳ ಸಮಸ್ಯೆಯನ್ನು ನಾಯಕರು ಬಗೆಹರಿಸಿದ್ದಾರೆ.
ಈಗ ಕಾಂಗ್ರೆಸ್ ನಾಯಕರು 2ನೇ ಪಟ್ಟಿಯನ್ನು ಗುರುವಾರ ಅಥವ ಶುಕ್ರವಾರ ಬಿಡುಗಡೆ ಮಾಡಿ. 3ನೇ ಪಟ್ಟಿಯಲ್ಲಿಯೂ ಕೆಲವು ಹೆಸರು ಘೋಷಣೆ ಮಾಡುವ ತಂತ್ರ ರೂಪಿಸಿದ್ದಾರೆ. ಚುನಾವಣಾ ಅಧಿಸೂಚನೆ ಪ್ರಕಟವಾಗುವುದು ಏಪ್ರಿಲ್ 13ಕ್ಕೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಆದ್ದರಿಂದ ಮೂರು ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ತಂತ್ರ ಪಕ್ಷದ್ದಾಗಿದೆ.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಇನ್ನೂ ಸಹ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಜೆಡಿಎಸ್ ಪಕ್ಷ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅಲ್ಲದೇ ಬುಧವಾರ ರಾತ್ರಿ ಅಥವ ಗುರುವಾರ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.












Click it and Unblock the Notifications