ಕಾಂಗ್ರೆಸ್ ಜಾತಿ ಸಮೀಕರಣ, ನೆನಪಿಸುತ್ತಿದೆ ದೇವೇಗೌಡರ ರಾಜಕಾರಣ
ಬೆಂಗಳೂರು, ಜೂನ್ 1: ಜಾತಿ ಹೊರತಾಗಿ ರಾಜಕೀಯ ಮಾಡುವುದು ಸಾಧ್ಯವಿದೆಯಾ? ಈ ಬಗ್ಗೆ ಕಾಂಗ್ರೆಸ್ ನವರನ್ನು ಕೇಳಿದರೆ, ಸಾಮಾಜಿಕ ನ್ಯಾಯ ಅಂದುಬಿಡ್ತಾರೆ. ಎಲ್ಲ ಜಾತಿ, ಧರ್ಮ ಹಾಗೂ ಪ್ರಾದೇಶಿಕವಾಗಿಯೂ ಪ್ರಾಶಸ್ತ್ಯ ನೀಡುವುದು ಕಾಂಗ್ರೆಸ್ ಮಾತ್ರ ಎಂಬುದು ಕೈ ಪಕ್ಷದವರ ಮಾತು.
ಇರಲಿ ನಿನ್ನೆಯಷ್ಟೇ (ಬುಧವಾರ) ಎಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯನ್ನು ಗಮನಿಸಿದಾಗ ಈ ವಿಷಯ ಮತ್ತೊಮ್ಮೆ ಖಾತ್ರಿಯಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಚುನಾವಣೆ ನೇತೃತ್ವ (ಕುರುಬ ಸಮುದಾಯ), ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ (ದಲಿತ ಸಮುದಾಯ), ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (ಒಕ್ಕಲಿಗ).[ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ]
ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ (ಲಿಂಗಾಯತ), ದಕ್ಷಿಣ ಕರ್ನಾಟಕದ ಉಸ್ತುವಾರಿ ದಿನೇಶ್ ಗುಂಡೂರಾವ್ (ಬ್ರಾಹ್ಮಣ), ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ (ವಾಲ್ಮೀಕಿ), ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾಗಿ ಕೆ.ಎಚ್.ಮುನಿಯಪ್ಪ (ದಲಿತ ಸಮುದಾಯ) ಆಯ್ಕೆಯಾಗಿದ್ದಾರೆ.
ಆದರೆ ಇಲ್ಲಿ ಅಲ್ಪಸಂಖ್ಯಾತ ವರ್ಗದಿಂದ ಅಂದರೆ ಮುಸ್ಲಿಂ, ಕ್ರಿಶ್ಚಿಯನ್ ರನ್ನು ಪ್ರತಿನಿಧಿಸುವ ನಾಯಕರು ಮುಂಚೂಣಿಯಲ್ಲಿ ಕಾಣುತ್ತಿಲ್ಲ. ಆದರೆ ಈ ಬಗ್ಗೆ ಮುಖಂಡರಾದ ಅರ್ಷಾದ್ ರಿಜ್ವಾನ್ ರನ್ನು ಒನ್ ಇಂಡಿಯಾ ಮಾತನಾಡಿಸಿದಾಗ, ಕಾಂಗ್ರೆಸ್ ನಿಂದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಿಗೆ ಯಾವಾಗಲೂ ಪ್ರಾಶಸ್ತ್ಯ ಸಿಕ್ಕಿದೆ ಎಂದರು.[ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗೃಹ ಖಾತೆಗೆ ರಾಜೀನಾಮೆ - ಪರಮೇಶ್ವರ್]

ಪ್ರಮುಖ ಖಾತೆಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಮರು
ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ನೀಡಲಾಗಿದೆ. ಇನ್ನೊಂದು ವಿಷಯ ಏನೆಂದರೆ, ಅಲ್ಪ ಸಂಖ್ಯಾತರಿಗೆ ಸಮಸ್ಯೆ ಅಂತ ಬಂದಾಗ ಪಕ್ಷ ಹೇಗೆ ವರ್ತಿಸುತ್ತದೆ ಅನ್ನೋದು ಮುಖ್ಯ. ಆ ವಿಷಯದಲ್ಲಿ ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ. ಇನ್ನು ನಿನ್ನೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಖಂಡಿತಾ ಜಾತಿ ನೋಡಿಲ್ಲ: ಅರ್ಷಾದ್ ರಿಜ್ವಾನ್.

ಅನುಭವ, ಶ್ರಮದ ಪರಿಗಣನೆ
ಆ ನಾಯಕರು ಪಕ್ಷಕ್ಕಾಗಿ ಪಟ್ಟಿರುವ ಶ್ರಮ, ಅನುಭವ ಇತರ ಅಂಶಗಳನ್ನು ನೋಡಿ ಅವಕಾಶ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು. ಆದರೆ ನಿನ್ನೆಯ ಪಟ್ಟಿ ನೋಡಿದಾಗ ಹಿಂದೆ ದೇವೇಗೌಡರು ಕಟ್ಟಿದ್ದ ಜನತಾದಳದ ತಂಡ ನೆನಪಾಗುತ್ತದೆ.

ದೇವೇಗೌಡರ ಟೀಂ ನೆನಪು
ದೇವೇಗೌಡರು, ಜೆ ಎಚ್ ಪಟೇಲ್, ಸಿದ್ದರಾಮಯ್ಯ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್, ಸಿಎಂ ಇಬ್ರಾಹಿಂ...ಹೀಗೆ ಎಲ್ಲ ಸಮುದಾಯವನ್ನೂ ಒಟ್ಟುಗೂಡಿಸಿ ಚುನಾವಣೆ ಎದುರಿಸಿದಾಗ ಭರ್ತಿ ಫಸಲು ಸಿಕ್ಕಿತ್ತು. ಈ ಬಾರಿ ಕಾಂಗ್ರೆಸ್ ನಲ್ಲಿ ಚುನಾವಣೆ ನೇತೃತ್ವ ಸಿದ್ದರಾಮಯ್ಯ ಅವರದು ಎಂದು ಘೋಷಣೆ ಮಾಡಿರುವುದು ಕೂಡ ಎರಡನೇ ಪ್ರಯೋಗ ಆಗಿದೆ.

ಕಾಂಗ್ರೆಸ್ ನಲ್ಲಿ ಹೊಸ ಪರಿಪಾಠ
ಏಕೆಂದರೆ, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಪದ್ಧತಿ ಇಲ್ಲ. ಆದರೆ ಪಂಜಾಬ್ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಯಿತು. ಅದರ ಫಲಿತಾಂಶದಿಂದ ಹಾಗೂ ಬಿಜೆಪಿಯಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿರುವುದರಿಂದ ಇಂಥ ರಣತಂತ್ರಕ್ಕೆ ಕೈ ಪಕ್ಷ ಮೊರೆ ಹೋಗಿದೆ.












Click it and Unblock the Notifications