ಕಾಂಗ್ರೆಸ್ ಬಿಜೆಪಿಗಳೆರಡೂ ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿವೆ : ಆಪ್
ಬೆಂಗಳೂರು, ಫೆಬ್ರವರಿ 5 : ರಾಜ್ಯ ಬಿಜೆಪಿಯು ಹಮ್ಮಿಕೊಂಡಿದ್ದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಮೊದಲು ಮಾತನಾಡಿ, ಕನ್ನಡದಲ್ಲೇ ಮಾತು ಮುಗಿಸಿದ್ದು ಸಂತಸದ ವಿಷಯ. ಆದರೆ ಕನ್ನಡಿಗರ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಯವರು ಚಕಾರವೆತ್ತದೇ ಹೋದದ್ದು ಅಕ್ಷಮ್ಯ.
ರಾಜ್ಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು? ರಾಜ್ಯದ 17 ಬಿಜೆಪಿ ಸಂಸದರ ಕೊಡುಗೆ ಏನು? ನಿಮ್ಮ ಅವಧಿಯಲ್ಲಿ ರಾಜ್ಯಕ್ಕೆ ಮಂಜೂರಾದ ಮಹತ್ವದ ಯೋಜನೆಗಳೆಷ್ಟು? ಎಂಬುದನ್ನು ಕನ್ನಡಿಗರು ಕೇಳಲೇಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷ (ಕರ್ನಾಟಕ) ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಮೋದಿಯವರು ಕೇವಲ ಕನ್ನಡದಲ್ಲಿ ಮಾತನಾಡುವುದು ಅಷ್ಟೇ ಅಲ್ಲ, ಕರ್ನಾಟಕ ಜನರಿಗೆ, ಜನರ ಸಮಸ್ಯೆಗಳಾದ ನಿರುದ್ಯೋಗ, ಕುಡಿಯುವ ನೀರು, ರೈತರ ಆತ್ಮಹತ್ಯೆ, ಬೆಳೆಗೆ ಸರಿಯಾಗಿ ದೊರಕದ ಬೆಲೆ, ಬೆಲೆ ಏರಿಕೆ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ರಾಜ್ಯದ 17 ಬಿಜೆಪಿ ಸಂಸದರಾಗಲೀ, ಕೇಂದ್ರ ಸರ್ಕಾರವಾಗಲೀ, ಕೈಗೊಂಡಿರುವ ಕ್ರಮಗಳೇನು, ಎಂಬುದನ್ನು ಏಕೆ ತಿಳಿಸಲಿಲ್ಲ?

ರಾಜ್ಯದ ಜ್ವಲಂತ ಸಮಸ್ಯೆಯಾಗಿರುವ ಮಹಾದಾಯಿ ಯೋಜನೆಯ ಬಗ್ಗೆ ತಾನು ಏಕೆ ಮಧ್ಯಪ್ರವೇಶಿಸಿ, ಸಂಧಾನ ಸಭೆ ಕರೆಯುತ್ತಿಲ್ಲ ಎಂಬುದನ್ನು ಹೇಳಬೇಕಿತ್ತು. ಕರ್ನಾಟಕದ ಮೇಲೆ ಪ್ರೀತಿ ಇದ್ದರೆ, ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಬೇಕೆ ಹೊರತು, ಕೇವಲ ಭಾಷಣ ಮಾಡುವುದರಿಂದ ಏನು ಪ್ರಯೋಜನವಿಲ್ಲ.
ಕಾಂಗ್ರೆಸ್ ಸರ್ಕಾರವನ್ನು 10% ಕಮೀಷನ್ ಸರ್ಕಾರವೆಂದು ಮೋದಿ ಕರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನೇ ಮುಚ್ಚಿಹಾಕಿ, ಎಸಿಬಿ ಎಂಬ ಹಲ್ಲು ಇಲ್ಲದ ಹಾವನ್ನು ಸೃಷ್ಟಿಸಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತಿರುವ ಸತ್ಯ. ಆದಾಗ್ಯೂ ಕಾಂಗ್ರೆಸ್ ಸರ್ಕಾರ 10% ಕಮೀಷನ್ ಪಡೆಯುತ್ತಿರುವುದು ನಿಖರವಾಗಿ ಗೊತ್ತಿದ್ದರೂ ಪ್ರತಿಪಕ್ಷವಾದ ಬಿಜೆಪಿ ಪಕ್ಷ ಸುಮ್ಮನಿದ್ದಿದ್ದೇಕೆ ಎಂಬುದೇ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2 ಲಕ್ಷ ಕೋಟಿ ಅನುದಾನ ನೀಡಿರುವುದಾಗಿ ಪ್ರಧಾನಿಯವರು ಭಾಷಣದಲ್ಲಿ ಹೇಳಿದ್ದಾರೆ. ಆದರೆ ರಾಜ್ಯದ ಸಚಿವ ಕೃಷ್ಣಭೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಕೇವಲ 70 ಸಾವಿರ ಕೋಟಿಯನ್ನಷ್ಟೆ ಕೊಟ್ಟಿದೆ ಎಂದಿದ್ದಾರೆ. ಈ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ? ಕೇಂದ್ರ ಸರ್ಕಾರ ನೀಡಿರುವ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.
ಬೆಳಗಾವಿಯಲ್ಲಿ ನಡೆದ ಅದಿವೇಶನದಲ್ಲಿ ಕೇವಲ ಬೆರಳಣಿಕೆಯಷ್ಟು ಸದಸ್ಯರು ಪಾಲ್ಗೊಂಡಿದ್ದು, ಮಹಾದಾಯಿ ವಿಷಯವಾಗಲಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರವಾಗಲಿ, ನಿರುದ್ಯೋಗ ಮತ್ತು ಸರಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆಗಳ ಬಗೆಗಾಗಲೀ ಚರ್ಚೆಯಾಗಲೇ ಇಲ್ಲ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಕರ್ನಾಟಕ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ.
ಒಂದಂತೂ ಸ್ಪಷ್ಟ, ಭ್ರಷ್ಟಾಚಾರದ ಕೆಸರಿನಲ್ಲಿ ಮುಳುಗಿರುವ ಕಾಂಗ್ರೆಸ್ ಬಿಜೆಪಿಗಳೆರಡೂ ಪರಸ್ಪರ ಕೆಸರು ಎರಚಿಕೊಳ್ಳುತ್ತಾ ರಾಜ್ಯದ ಹಿತ ಕಡೆಗಣಿಸಿದ್ದಾರೆ. ಇಂತಹ ಭ್ರಷ್ಟ ಪಕ್ಷಗಳನ್ನು ತೊಲಗಿಸಿ ದಕ್ಷ ಹಾಗೂ ಸ್ವಚ್ಛ ರಾಜಕೀಯ ಪಕ್ಷಕ್ಕೆ ಮತ ಹಾಕಬೇಕೆಂದು ರಾಜ್ಯದ ಮತದಾರರಲ್ಲಿ ಆಮ್ ಆದ್ಮಿ ಪಕ್ಷ ವಿನಂತಿ ಮಾಡಿಕೊಳ್ಳುತ್ತದೆ.












Click it and Unblock the Notifications