ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಸ ರಾಜಕೀಯ ಭಾಷ್ಯ ಬರೆಯುತ್ತಾ?
ಮೈಸೂರು, ಮೇ 21: ಚುನಾವಣಾ ಫಲಿತಾಂಶ ಬಂದ ಬಳಿಕ ಇಡೀ ದೇಶ ಕರ್ನಾಟಕದತ್ತ ದೃಷ್ಠಿ ನೆಟ್ಟು ಕೂತಿತ್ತು. ಎಲ್ಲರಲ್ಲೂ ಕುತೂಹಲ ಮೂಡಿದ್ದಂತು ಸತ್ಯ. ಇದೀಗ ಎಲ್ಲ ಲೆಕ್ಕಚಾರಗಳು ತಲೆಕೆಳಗಾಗಿದ್ದು ಏನು ಆಗಲ್ಲ ಅಂದುಕೊಂಡಿದ್ದರೋ ಅದೇ ಆಗಿರುವುದು ಮತ್ತು ಮುಂದೆ ಆಗಲಿರುವುದು ಎಲ್ಲವೂ ನಮ್ಮ ಆಲೋಚನೆಗಳಿಗೆ ನಿಲುಕುವಂತೆ ಕಂಡು ಬರುತ್ತಿಲ್ಲ.
ಈ ಬಾರಿಯ ಚುನಾವಣೆ ಮಾತ್ರ ಕಡು ವೈರಿಗಳನ್ನು ಒಂದು ಮಾಡಿ ಆ ಮೂಲಕವೇ ಮತ್ತೆ ವಿರೋಧಿ ಬಣಗಳೆಲ್ಲ ಸೇರಿ ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಗ್ಗು ಬಡಿಯೋದಕ್ಕೆ ವೇದಿಕೆಯಾಗುತ್ತಿರುವುದಂತು ಸತ್ಯ.
ಈಗಿನ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡೆ ನೋಡಿದರೆ ಪ್ರಮಾಣ ವಚನದ ದಿನದಿಂದಲೇ ಹೊಸ ಶಕ್ತಿಯನ್ನು ದೇಶದಲ್ಲಿ ಹುಟ್ಟು ಹಾಕುವ ಉಮೇದಿ ಕಂಡು ಬರುತ್ತಿದೆ.

ರಾಹುಲ್ ಗಾಂಧಿ, ಸೋನಿಯಾಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರುಬಾಬು ನಾಯ್ಡು ಎಲ್ಲರನ್ನು ರಾಜ್ಯಕ್ಕೆ ಕರೆಯಿಸಿ ಜಾತ್ಯಾತೀತ ಶಕ್ತಿಯ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಬಿಜೆಪಿಗೊಂದು ಎಚ್ಚರಿಕೆ ಸಂದೇಶ ನೀಡುವ ತಂತ್ರ ಇಲ್ಲಿ ಎದ್ದು ಕಾಣುತ್ತಿದೆ.
ಮಗನನ್ನು ಮುಖ್ಯಮಂತ್ರಿ ಮಾಡುವ ದೇವೇಗೌಡರ ಕನಸು ನೆರವೇರಿದೆ. ಅದಕ್ಕಾಗಿ ಮಾಡಿದ ಪೂಜೆ, ಯಾಗ ಎಲ್ಲವೂ ಫಲಿಸಿದೆ. ಕುಮಾರಸ್ವಾಮಿ ಅವರು ಕೂಡ ಹುಣ್ಣಿಮೆ, ಅಮಾವಾಸ್ಯೆ ಪೂಜೆ ಮಾಡುವ ಮೂಲಕ ಇಷ್ಟಾರ್ಥ ನೆರವೇರಲು ಹರಕೆ ಕಟ್ಟಿಕೊಂಡಿದ್ದರು. ಅದು ಕೂಡ ಕೈಗೂಡಿದೆ. ಆದರೆ ಇನ್ನು ಮುಂದೆ ಇರುವುದು ಮಾತ್ರ ಸವಾಲಿನ ಪರಿಸ್ಥಿತಿ ಎಂಬುದಂತು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಅಧಿಕಾರಕ್ಕೆ ಹೊಂದಾಣಿಕೆ ಮಾಡಿಕೊಂಡಿರಬಹುದು. ಆದರೆ ಯಾವುದೇ ಕಾರಣಕ್ಕೂ ಎರಡು ಪಕ್ಷಗಳು ವಿಲೀನವಾಗುವುದಿಲ್ಲ ಎಂಬುದು ಅಷ್ಟೇ ಸತ್ಯ. ಹೀಗಾಗಿ ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವುದು ಸುಲಭದ ಕೆಲಸವೇನಲ್ಲ.
ಹಾಗೆ ನೋಡಿದರೆ ಕುಮಾರಸ್ವಾಮಿ ಅವರು ರೈತರನ್ನು ಆಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎತ್ತಿಕಟ್ಟಿದರು. ಅದರ ಪರಿಣಾಮ ಆಡಳಿತ ವಿರೋಧಿ ಅಲೆ ಸದ್ದಿಲ್ಲದೆ ಎದ್ದು ನಿಂತಿತು. ಮಂಡ್ಯದಲ್ಲಿ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಾವಿರಾರು ರೈತರ ಕುಟುಂಬ ಮತ್ತು ಸಾಲದಲ್ಲೇ ಕಾಲಕಳೆಯುತ್ತಿರುವ ರೈತರು ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಒಳಿತಾಗುತ್ತೆ ಎಂದು ನಂಬಿ ಜೆಡಿಎಸ್‌ನ್ನು ಬೆಂಬಲಿಸಿದರು. ಅದರ ಪರಿಣಾಮ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನಿಂದ ಬೀಗಿತು.
ಆದರೆ ಈಗ ಆಗಿರುವುದೇ ಬೇರೆ. 55ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಕೃಷಿ ಸಾಲವನ್ನು ಒಂದು ಲಕ್ಷದವರೆಗೆ ಮನ್ನಾ ಮಾಡುವ ಗುಮ್ಮವನ್ನು ಬಿಟ್ಟು ಹೋಗಿದ್ದಾರೆ. ಅದು ಕುಮಾರಸ್ವಾಮಿ ಅವರಿಗೆ ಎಫೆಕ್ಟ್ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಒಂದು ವೇಳೆ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದರೂ ಅದರ ಲಾಭವನ್ನು ಎರಡು ಪಕ್ಷಗಳು ಹೇಗೆ ಹಂಚಿಕೊಳ್ಳುತ್ತವೆ ಎನ್ನುವುದು ಈಗ ಕುತೂಹಲಕಾರಿಯಾಗಿದೆ. ಅಲ್ಲಿ ನಾಯಕರು ಅಧಿಕಾರದ ಆಸೆಗೆ ಒಂದಾಗಿರಬಹುದು. ಆದರೆ ಚುನಾವಣೆ ವೇಳೆ ಪರಸ್ಪರ ಕಿತ್ತಾಡಿಕೊಂಡ ಕಾರ್ಯಕರ್ತರು ಒಟ್ಟಾಗಿ ನಡೆಯುವುದು ಅಷ್ಟು ಸುಲಭವಲ್ಲ.
ಇನ್ನು ಸಚಿವ ಸ್ಥಾನ, ನಿಗಮಮಂಡಳಿ ಹಂಚಿಕೆ ವೇಳೆ ಅಸಮಾಧಾನಗಳು ಹೊರ ಬರುವ ಸಾಧ್ಯತೆ ಇಲ್ಲದಿಲ್ಲ. ಆದರೆ ಅದೆಲ್ಲವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಕೇವಲ ಬಿಜೆಪಿಯನ್ನಷ್ಟೆ ಬಗ್ಗು ಬಡಿಯ ಬೇಕೆಂಬ ಕಾರಣಕ್ಕೆ ಇವರೇನಾದರೂ ಮೈತ್ರಿ ಮಾಡಿಕೊಂಡಿದ್ದರೆ ಅದು ಹೆಚ್ಚು ದಿನ ಬಾಳುವುದಿಲ್ಲ.
ಇಲ್ಲ ರಾಜ್ಯಕ್ಕೆ ಒಂದು ಒಳ್ಳೆಯ ಆಡಳಿತ ಕೊಡುತ್ತೇವೆ ಎಂಬ ಚಿಂತನೆಯಲ್ಲಿದ್ದರೆ ಅದನ್ನು ಜನ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಇಲ್ಲದೆ ಹೋದರೆ ಎತ್ತು ಏರಿಗೆ ಕೋಣ ನೀರಿಗೆ ಎಳೆದಂತ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ.
ಕರ್ನಾಟಕದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಭವಿಷ್ಯದ ರಾಜಕೀಯದಲ್ಲಿ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಮಟ್ಟದಲ್ಲೂ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಬಹುದು ಎಂಬುದನ್ನು ನಾವು ಕಾದು ನೋಡಬೇಕಿದೆ.












Click it and Unblock the Notifications