Congress: 'ಹೈ'ಕಮಾಂಡ್‌ಗೆ ರಾಜ್ಯ 'ಕೈ' ನಾಯಕರದ್ದೇ ಚಿಂತೆ: ಯಾಕೆ ಗೊತ್ತಾ?
ಬೆಂಗಳೂರು, ಜನವರಿ 18: ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜಕೀಯ ತಲೆನೋವು ಆರಂಭವಾಗಿವೆ. ಒಂದು ಕಡೆ ರಾಜಕೀಯವಾಗಿ ಅಂದುಕೊಂಡಂತೆ ಯಾವುದೂ ಆಗುತ್ತಿಲ್ಲವೆಂಬ ನಿರಾಸೆ ಕಾಡುತ್ತಿದ್ದರೆ, ಮತ್ತೊಂದು ಕಡೆ ತಮ್ಮದೇ ನೇತೃತ್ವದ ಐಎನ್ ಡಿಐಎ ಒಕ್ಕೂಟದಲ್ಲಿದ್ದ ಪ್ರಾದೇಶಿಕ ಪಕ್ಷಗಳು ಒಂದರ ಮೇಲೊಂದರಂತೆ ಕಳಚಿಕೊಳ್ಳುತ್ತಿವೆ. ಇದರ ನಡುವೆ ರಾಜ್ಯ ರಾಜಕೀಯದಲ್ಲಿ ಅಸಮಾಧಾನ ಭುಗಿಲೆದ್ದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅದ್ಯಾಕೋ ಗೊತ್ತಿಲ್ಲ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಪಕ್ಷದ ಒಳಗೆ ಮತ್ತು ಹೊರಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇದ್ದು, ಎಲ್ಲದರ ಜವಬ್ದಾರಿ ತೆಗೆದುಕೊಂಡು ನಿಭಾಯಿಸುವ ಮತ್ತು ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಖಡಕ್ ತೀರ್ಮಾವನ್ನು ಕೈಗೊಳ್ಳಲು ಹೈಕಮಾಂಡ್ ಮುಂದೆ ಬಾರದಿರುವುದು ಎಲ್ಲೋ ಒಂದು ಕಡೆ ಅನುಮಾನವನ್ನು ಹುಟ್ಟುಹಾಕುತ್ತಿದೆ.

ಅತ್ತ ಇಂಡಿಯಾ(ಐಎನ್ ಡಿಐಎ) ಒಕ್ಕೂಟದಲ್ಲಿದ್ದ ಅಂಗಪಕ್ಷಗಳೇ ವಿರೋಧಿಗಳಾಗುತ್ತಿದ್ದರೆ, ಇತ್ತ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಲ್ಲಿ ಬಣಬಡಿದಾಟ, ಅಧಿಕಾರ ಹಸ್ತಾಂತರದ ಕೂಗುಗಳು ರಾಜ್ಯದಾಚೆಗೂ ಸದ್ದು ಮಾಡುತ್ತಿದೆ. ದೆಹಲಿ ಚುನಾವಣೆ ಸನಿಹದಲ್ಲಿರುವಾಗಲೇ ರಾಜ್ಯ ರಾಜಕೀಯದಲ್ಲಿ ಭುಗಿಲೆದ್ದಿರುವ ಅಸಮಾಧಾನ ಹೈಕಮಾಂಡ್ ಗೆ ಕಿರಿಕಿರಿಯನ್ನುಂಟು ಮಾಡಿದೆ. ಇಲ್ಲಿನ ಶಮನಕ್ಕೆ ಮುಲಾಮು ಹಚ್ಚುವುದೋ ಅಥವಾ ದೆಹಲಿ ಚುನಾವಣೆಯನ್ನು ಎದುರಿಸುವುದೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಇಷ್ಟು ದಿನಗಳ ಕಾಲ ಎಲ್ಲವನ್ನು ಸಹಿಸಿಕೊಂಡು ಕೆಲವು ನಾಯಕರಿಗೆ ಪಕ್ಷದೊಳಗೆ, ಪಕ್ಷದ ವೇದಿಕೆಯಲ್ಲಿಯೇ ಖಡಕ್ ಸೂಚನೆಗಳನ್ನು ನೀಡುತ್ತಿದ್ದ ಮಲ್ಲಿಕಾರ್ಜುನಖರ್ಗೆ ಅವರು ಇದೀಗ ಬಹಿರಂಗವಾಗಿಯೇ ಎಚ್ಚರಿಕೆಯನ್ನು ನೀಡುವ ಮಟ್ಟಿಗೆ ಬಂದಿದ್ದಾರೆ ಎಂದರೆ ಅವರಿಗೂ ರಾಜ್ಯ ನಾಯಕರ ಕಿತ್ತಾಟ ಬೇಸರ ತರಿಸಿದೆ ಎನ್ನುವುದಂತು ನಿಜ. ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್ ನ ರಾಜ್ಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ತಾವು ಯಾರಿಗೂ ತಲೆ ಬಾಗಲ್ಲ ನಮಗೆ ನಾವೇ ಸುಪ್ರೀಂ ಎಂಬ ತೀರ್ಮಾನಕ್ಕೆ ಕೆಲವು ನಾಯಕರು ಬಂದಂತಿದೆ.

ಅಧಿಕಾರದ ಹಿಂದೆ ಬಿದ್ದಿರುವ ನಾಯಕರು
ಕೆಲವು ಸಚಿವರು ಮತ್ತು ಶಾಸಕರು ಬಣಗಳಾಗಿ ವಿಂಗಡಣೆಗೊಂಡಿದ್ದು, ಸಮುದಾಯವಾರು ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಹೀಗಾಗಿ ಯಾರ ಮಾತನ್ನೂ ಯಾರೂ ಕೇಳದಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇದು ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಗಮನಿಸುವ ಎಲ್ಲರಿಗೂ ಅರ್ಥವಾಗುತ್ತಿದೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಣಗಳು ಎದ್ದು ಕಾಣಿಸುತ್ತಿದ್ದರೂ ಮುಂದಿನ ದಿನಗಳಲ್ಲಿ ಲಿಂಗಾಯಿತ ಸಮುದಾಯದ ನಾಯಕರು ಕೂಡ ಅಧಿಕಾರ ಹಂಚಿಕೆ ವಿಚಾರದಲ್ಲಿ ಮುನ್ನಲೆಗೆ ಬರಲಿದ್ದಾರೆ.
ಈಗಾಗಲೇ ಅವರು ಕೂಡ ತಮಗೂ ಸಿಎಂ ಸ್ಥಾನ ಬೇಕು ಎಂಬ ವಿಚಾರವನ್ನು ತೇಲಿ ಬಿಟ್ಟಿದ್ದರು. ಹೀಗಾಗಿ ಯಾರನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿ ಹೈಕಮಾಂಡ್ ಇದ್ದು, ಇಲ್ಲಿನ ಕೆಲವೊಂದು ಬೆಳವಣಿಗೆಗಳು ಹೈಕಮಾಂಡ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜತೆಗೆ ಯಾರ ಮೇಲೂ ಶಿಸ್ತಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏನೇ ಅಸಮಾಧಾನ ಭುಗಿಲೆದ್ದರೂ ಅದನ್ನು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಶಿಸ್ತಿನ ಕ್ರಮದ ಮೂಲಕ ಹೋದರೆ ಅದರ ಪರಿಣಾಮಗಳು ಬೇರೆಯದ್ದೇ ಆದ ಫಲಿತಾಂಶವನ್ನು ನೀಡಬಹುದು ಎಂಬ ಭಯವೂ ಇಲ್ಲದಿಲ್ಲ.

ನಾಯಕರನ್ನು ನಿಭಾಯಿಸುವುದೇ ಸವಾಲ್
ಆದರೆ ಒಟ್ಟಾಗಿ ಎಲ್ಲ ನಾಯಕರನ್ನು ಪಕ್ಷದ ವೇದಿಕೆಯೊಳಗೆ ಕೊಂಡೊಯ್ಯಲು ಸಾಧ್ಯನಾ? ಎಂಬ ಪ್ರಶ್ನೆಗೆ ಉತ್ತರಗಳು ಹೈಕಮಾಂಡ್ ಮುಂದೆ ಇಲ್ಲದಂತಾಗಿದೆ. ಇಲ್ಲಿ ಒಂದು ಬಣದ ಪರ ನಿಂತರೆ ಮತ್ತೊಂದು ಬಣ ಸೆಟೆದು ನಿಲ್ಲುತ್ತದೆ. ಅದರ ಪರಿಣಾಮಗಳು ಬಹುಶಃ ಪಕ್ಷದ ಮೇಲೆ ಮಾತ್ರವಲ್ಲ, ಸರ್ಕಾರದ ಮೇಲೆ ಬೀರಿದರೂ ಅಚ್ಚರಿಯಿಲ್ಲ. ಹೀಗಾಗಿ ಹೈಕಮಾಂಡ್ ನಾಯಕರು ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನುವುದಂತು ನಿಜ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಗೆ ದೆಹಲಿ ಚುನಾವಣೆಯನ್ನು ಎದುರಿಸುವುದೋ? ಕರ್ನಾಟಕ ರಾಜ್ಯ ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿರುವ ಅಸಮಾಧಾನಗಳನ್ನು ಶಮನಗೊಳಿಸುವುದೋ? ಎಂದು ಆಲೋಚಿಸುವಂತಾಗಿದೆ.
ಸದ್ಯ ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಮೌನವಾಗಿರಿ ಎಂಬ ಸಲಹೆಗಳನ್ನಷ್ಟೇ ನೀಡಬಹುದು. ಅದನ್ನು ಹೊರತು ಪಡಿಸಿ ಯಾರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇಲ್ಲಿ ಏನೇ ಬೆಳವಣಿಗೆಗಳು ನಡೆದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಲಿದೆ. ರಾಹುಲ್ ಗಾಂಧಿ ಹೋರಾಟ ಮಾಡಬಹುದು, ಹೇಳಿಕೆಗಳನ್ನು ನೀಡಬಹುದು ಆದರೆ ಪಕ್ಷದೊಳಗಿನ ಅಸಮಾಧಾನಗಳನ್ನು ಸರಿಪಡಿಸಿ, ಪಕ್ಷದ ನಾಯಕರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಾಮರ್ಥ್ಯ ಅವರಿಗಿಲ್ಲ ಎಂಬುದು ಇವತ್ತಿನ ಕಾಂಗ್ರೆಸ್ ಪರಿಸ್ಥಿತಿಯನ್ನು ಗಮನಿಸಿದರೆ ಗೊತ್ತಾಗುತ್ತದೆ.
ಬಣಬಡಿದಾಟಕ್ಕೆ ತೆರೆ ಬೀಳುವುದು ಯಾವಾಗ?
ಈಗಾಗಲೇ ರಾಜ್ಯ ನಾಯಕರನ್ನು ಕರೆದು ಖಡಕ್ ಎಚ್ಚರಿಕೆಯನ್ನು ನೀಡಿ ಕಳುಹಿಸಬಹುದಿತ್ತು. ಆದರೆ ಇದು ಆಗಲೇ ಇಲ್ಲ. ಇದು ಹೈಕಮಾಂಡ್ ವಿರುದ್ಧ ಬೇರೆಯದ್ದೇ ಆದ ಸಂದೇಶವನ್ನು ರವಾನಿಸುತ್ತಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಅವರಿಗೆ ರಾಜ್ಯ ನಾಯಕರಲ್ಲಿನ ಅಸಮಾಧಾನಕ್ಕೆ ಶಮನಗೊಳಿಸುವ ಕೆಲಸದ ಜವಬ್ದಾರಿ ನೀಡಿದ್ದಾರೆ. ಇದರಲ್ಲಿ ಯಶಸ್ವಿಯಾಗುತ್ತಾರಾ ಗೊತ್ತಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಅಧಿಕಾರ ಹಸ್ತಾಂತರದ ಬಡಿದಾಟ ಹೈಕಮಾಂಡ್ ನಾಯಕರ ನೆಮ್ಮದಿ ಕೆಡಿಸಿರುವುದಂತು ನಿಜ. ಇದು ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಹೈಕಮಾಂಡ್ ಗೆ ಕರ್ನಾಟಕ ಬಹುಮುಖ್ಯವಾಗಿದ್ದು, ಇಲ್ಲಿ ಏನೇ ಬೆಳವಣಿಗೆ ನಡೆದರೂ ಅದು ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಇಷ್ಟು ದಿನ ಮೌನವಾಗಿದ್ದ 'ಕೈ'ಕಮಾಂಡ್ ಎಚ್ಚೆತ್ತುಕೊಂಡಿದೆ. ಇದರ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.












Click it and Unblock the Notifications