Government Employee; ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಸ್ಪಷ್ಟೀಕರಣ
ಬೆಂಗಳೂರು, ಜನವರಿ 08: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಪರೀಕ್ಷೆಗಳ ಕುರಿತು ಹಲವು ಗೊಂದಲಗಳಿವೆ.
ಪೊಲೀಸ್ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಬಗ್ಗೆ ಗೊಂದಲ ಉಂಟಾಗಿದೆ. ಈ ಕುರಿತು ಸ್ಪಷ್ಟನೆ ಕೇಳಲಾಗಿತ್ತು. ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಾರ್ಯಾಲಯ ಈ ಕುರಿತು ಹಿಂಬರಹ ನೀಡಿದೆ.

ಎಲ್ಲಾ ಘಟಕಾಧಿಕಾರಿಗಳಿಗೆ ಈ ಕುರಿತು ಡಾ. ಸುಮನ್ ಡಿ. ಪೆನ್ನೇಕರ್, ಐಪಿಎಸ್, ಎ.ಐ.ಜಿ.ಪಿ ಆಡಳಿತ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಪರವಾಗಿ ಸ್ಪಷ್ಟನೆ ನೀಡಿದ್ದಾರೆ.
ವಿವರಗಳು; ಪೊಲೀಸ್ ಕಾನ್ಸ್‌ಟೇಬಲ್ ರವರುಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡುವ, ಪ್ರೋತ್ಸಾಹ ಧನ ಮಂಜೂರು ಮಾಡುವ ಹಾಗೂ ಮುಂಬಡ್ತಿ ನೀಡುವ ಕುರಿತು ಹಲವು ಘಟಕಾಧಿಕಾರಿಗಳು ಸ್ಪಷ್ಟೀಕರಣ ಕೋರುತ್ತಿರುವ ಬಗ್ಗೆ ಪರಿಶೀಲಿಸಿ ಕೆಳಕಂಡಂತೆ ಸೃಷ್ಟೀಕರಣ ನೀಡಲಾಗಿದೆ.
ಸರ್ಕಾರದ ಅಧಿಸೂಚನೆ ದಿನಾಂಕ 7/3/2012ರಲ್ಲಿನ ನಿಯಮ 1 (3)ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಕಂಪ್ಯೂಟರ್ ಸಾಕ್ಷರತಾ ನಿಯಮವು ಅನ್ವಯವಾಗತಕ್ಕದ್ದಲ್ಲ ಎಂದು ತಿಳಿಸಿರುವುದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಸಿಪಿಸಿ/ ಎಪಿಸಿ ರವರುಗಳ ಮುಂಬಡ್ತಿಗೆ ಕಡ್ಡಾಯವಾಗಿರುವುದಿಲ್ಲ.
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯು ಕಡ್ಡಾಯವಲ್ಲವಾದ್ದರಿಂದ ಸದರಿಯವರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಸಹ ಅವರಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡದೇ ಇರುವ ಸಿಬ್ಬಂದಿಗಳನ್ನು ಮುಂಬಡ್ತಿ ಪರಿಗಣಿಸುವ ಕುರಿತು ಸರ್ಕಾರದಿಂದ ಸ್ಪಷ್ಟೀಕರಣ ಕೋರಲಾಗಿದ್ದು, ಸರ್ಕಾರದ ಪತ್ರ ದಿನಾಂಕ 16/12/2023ರಲ್ಲಿ ಸ್ಪಷ್ಟೀಕರಣ ನೀಡಲಾಗಿದೆ. ಸದರಿ ಸರ್ಕಾರದ ಪತ್ರವನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಹೇಳಿದೆ.
ಸರ್ಕಾರದ ಅಪರ ಕಾರ್ಯದರ್ಶಿ ಒಳಡಾಳಿತ ಇಲಾಖೆ ಇವರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ನೃಪತುಂಗ ರಸ್ತೆ ಇವರಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಸಂಬಂಧಿಸಿದಂತೆ ಸೃಷ್ಟೀಕರಣ ನೀಡಿ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡುವ ಬಗ್ಗೆ ಕೋರಲಾಗಿತ್ತು. ಪ್ರಸ್ತಾವನೆಯನ್ನು ಪರಿಶೀಲಿಸಿದೆ, ಅಧಿಸೂಚನೆ 7/3/2012ರಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿರುವ ಅವಧಿಯನ್ನು ಕಾಲಕಾಲಕ್ಕೆ ತಿದ್ದುಪಡಿ ಅಧಿಸೂಚನೆಗಳ ಮೂಲಕ ನಿಯಮ 2 ಮತ್ತು 3ಕ್ಕೆ ತಿದ್ದುಪಡಿ ಮಾಡಿ ಕ್ರಮವಾಗಿ ನೇರ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿದ್ದ ಕಾಲಾವದಿಯನ್ನು ನಿರಂತರವಾಗಿ ವಿಸ್ತರಿಸಲಾಗಿರುತ್ತದೆ.
ಕಾಲಾವಧಿಯನ್ನು ನಿರಂತರವಾಗಿ ವಿಸ್ತರಿಸಿರುವ ಹಿನ್ನಲೆಯಲ್ಲಿ ಅಧಿಸೂಚನೆಯು ಈ ಹಿಂದಿನ ದಿನಾಂಕದಿಂದ ಕಾಲಾವಧಿ ವಿಸ್ತರಿಸಿ ನಿಗದಿಪಡಿಸಿರುವ ದಿನಾಂಕದವರೆಗೂ ಅನ್ವಯವಾಗುತ್ತದೆ. ಈ ಹಿನ್ನಲೆಯಲ್ಲಿ ಜೇಷ್ಠತೆಯಲ್ಲಿ ಹಿರಿಯವರಾದ ಅಧಿಕಾರಿ/ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದನ್ನು ಹೊರತುಪಡಿಸಿ ಮುಂಬಡ್ತಿ ಹೊಂದಲು ಮಿಕ್ಕೆಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಸದರಿಯವರನ್ನು ದಿನಾಂಕ 31/12/2022ರವರೆಗೆ ನಿಯಮಾನುವಾರ ಮುಂಬಡ್ತಿಗೆ ಪರಿಗಣಿಸಬಹುದೆಂದು ತಿಳಿಸಲು ನಿರ್ದೇಶಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 1(3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗುವ ಬಗ್ಗೆ ಹಲವು ಬಾರಿ ಸುತ್ತೋಲೆ ಹೊರಡಿಸಲಾಗಿದೆ.












Click it and Unblock the Notifications