ಬಿಜೆಪಿಯ ಮತ್ತೊಂದು ನೀತಿ ವಾಪಸ್: ಸಿಎಂ ಸಿದ್ದು

ಯಾವುದೇ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಲು ಅಸಮರ್ಥರಾದಾಗ ಅಂತಹ ನೌಕರರ ಮೊದಲ ಸಂಬಂಧಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ನೀತಿಯನ್ನು 2011ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿತ್ತು.
ಅದಕ್ಕಾಗಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ಕಾಯ್ದೆಗೆ ತಿದ್ದುಪಡಿಯನ್ನೂ ತಂದಿತ್ತು. ಆದರೆ, ಆ ಕಾಯ್ದೆಯ ದುರುಪಯೋಗವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಆ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಆದೇಶ ಹೊರಡಿಸಿದೆ.
ಕೆಲ ಸರ್ಕಾರಿ ನೌಕರರು ನಿವೃತ್ತಿಯ ಅಂಚಿನಲ್ಲಿರುವಾಗ ದೈಹಿಕವಾಗಿ ಅಥವಾ ಮಾನಸಿಕ ಕಾಯಿಲೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಅನಾರೋಗ್ಯಪೀಡಿತ ನೌಕರನ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಮೇಲೆ ನೌಕರಿ ಒದಗಿಸುವ ಸದುದ್ದೇಶದಿಂದ '1996ರ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ಕಾಯ್ದೆ'ಗೆ ಹಿಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು.
ವೈದ್ಯಕೀಯ ಪ್ರಮಾಣ ಪತ್ರ ಆಧರಿಸಿ ಕೆಲ ಷರತ್ತುಗಳಿಗೆ ಒಳಪಟ್ಟು ಉದ್ಯೋಗ ನೀಡುವ ಬಗ್ಗೆ 2011ರ ಅ. 13ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರಿ ನೌಕರರು ತಮ್ಮ ಹುದ್ದೆ ಸಂಬಂಧ ಕರ್ತವ್ಯ ನಿರ್ವಹಿಸುವಾಗ ಸಂಭವಿಸುವ ಅಪಘಾತದಿಂದ ಅಥವಾ ಕಾಯಿಲೆಯಿಂದ ದೈಹಿಕ- ಮಾನಸಿಕವಾಗಿ ಶಾಶ್ವತವಾಗಿ ಅಸಮರ್ಥರಾದರೆ ಅವರ ಕುಟುಂಬಕ್ಕೆ ನೆರವಾಗುವುದು ಈ ತಿದ್ದುಪಡಿ ಕಾಯ್ದೆ ಉದ್ದೇಶವಾಗಿತ್ತು.
ದೈಹಿಕ ಅಥವಾ ಮಾನಸಿಕ ಅಸಮರ್ಥತೆಯು ಸರ್ಕಾರಿ ಸೇವೆ ವೇಳೆ ಅದರಲ್ಲಿಯೂ ಕರ್ತವ್ಯ ನಿರ್ವಹಿಸುವಾಗ ಸಂಭವಿಸುವ ಕಾರಣಗಳಿಂದ ಉಂಟಾಗಿರಬೇಕು. ಅದನ್ನು ಬಿಟ್ಟು, ವಯಸ್ಸಿಗೆ ಅನುಗುಣವಾಗಿ ಬರುವ ಕಾಯಿಲೆ ಅಥವಾ ಕರ್ತವ್ಯದ ಮೇಲಿಲ್ಲದ ಸಂದರ್ಭದಲ್ಲಿ ಉಂಟಾಗುವ ಅಪಘಾತದಿಂದ ಆಗುವ ಅಸಮರ್ಥತೆ ಕಾರಣಕ್ಕೆ ನೌಕರರ ಅವಲಂಬಿತರಿಗೆ ಕೆಲಸ ನೀಡುವುದು ಈ ಕಾಯ್ದೆ ತಿದ್ದುಪಡಿ ಉದ್ದೇಶವಾಗಿರಲಿಲ್ಲ.
ಅನುವಂಶಿಕ ರೂಪದಲ್ಲಿ ಸರ್ಕಾರಿ ನೌಕರಿ- ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!
ಆದರೆ, ಕೆಲ ಸರ್ಕಾರಿ ನೌಕರರು ನಿವೃತ್ತಿಗೆ ಕೆಲವೇ ವರ್ಷಗಳು ಬಾಕಿ ಇರುವಾಗ, ಸಾಮಾನ್ಯ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ ಇತ್ಯಾದಿ ನೆಪವೊಡ್ಡಿ ತಾವು ದೈಹಿಕವಾಗಿ ಅಥವಾ ಮಾನಸಿಕವಾಗಿ ಕೆಲಸ ಮುಂದುವರಿಸಲು ಅಸಮರ್ಥರು ಎನ್ನುವ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸುತ್ತಿದ್ದರು. ಆ ಮೂಲಕ, ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಯನ್ನು ಅನುವಂಶಿಕ ಸ್ವರೂಪದಲ್ಲಿ ಪಡೆಯುವ ಯತ್ನ ನಡೆಸುತ್ತಿದ್ದರು. ಹೀಗಾಗಿ, ಈ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ 2011ರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿರುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.












Click it and Unblock the Notifications