R Shankar : ಎಂಎಲ್ಸಿ ಆರ್. ಶಂಕರ್ ಮನೆ ಮೇಲೆ ದಾಳಿ; ರಾಶಿ ರಾಶಿ ಸೀರೆ, ತಟ್ಟೆ, ಲೋಟ, ಸ್ಕೂಲ್ ಬ್ಯಾಗ್ ಪತ್ತೆ!
ಆರ್. ಶಂಕರ್ ನಿವಾಸದ ಮೇಲೆ ವಾಣಿಜ್ಯ ತರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸೀರೆ, ಪ್ಲೇಟ್‌ಗಳು ಮತ್ತು ಶಾಲಾ ಬ್ಯಾಗ್‌ಗಳಂತಹ ವಿವಿಧ ವಸ್ತುಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಹಾವೇರಿ, ಮಾರ್ಚ್16: ಬಿಜೆಪಿ ಎಂಎಲ್ಸಿ ಆರ್ ಶಂಕರ್ ಅವರ ಗೃಹ ಕಚೇರಿ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದು, ಮತದಾರರಿಗೆ ಹಂಚಲು ಉದ್ದೇಶಿಸಿರುವ ಶಂಕರ್ ಅವರ ಫೋಟೋ ಇರುವ ಸೀರೆ, ಪ್ಲೇಟ್‌ಗಳು ಮತ್ತು ಶಾಲಾ ಬ್ಯಾಗ್‌ಗಳಂತಹ ವಿವಿಧ ವಸ್ತುಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬೀರೇಶ್ವರ ನಗರದಲ್ಲಿ ನಿವಾಸ ಹಾಗೂ ಕಚೇರಿ ಮೇಲೆ ಮೊದಲು ವಾಣಿಜ್ಯ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿತು. ಕಚೇರಿಯಲ್ಲಿಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದ್ದ ವ್ಯಾನಟಿ ಬ್ಯಾಗ್, ಕುಕ್ಕರ್, ಸೀರೆ, ತಟ್ಟೆ, ಲೋಟ, ಸ್ಕೂಲ್ ಬ್ಯಾಗ್ ಪರಿಶೀಲನೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಇವುಗಳಿಗೆ ಬಿಲ್ ತೋರಿಸುವಂತೆ ತಾಕೀತು ಮಾಡಿದ್ದಾರೆ.

ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದ ವೇಳೆ ಬಂದೋಬಸ್ತ್ ಗೆ ಬಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೀವು ಯಾರು ದಾಳಿ ಮಾಡಲು, ಈಗ ನೀತಿ ಸಂಹಿತೆಯಿಲ್ಲ. ನಮ್ಮಲ್ಲಿ ಬಿಲ್ ಇದೆ. ಎಲ್ಲವನ್ನೂ ತೋರಿಸುತ್ತೇವೆ. ಯಾವ ಕಾರಣಕ್ಕೂ ಜಪ್ತಿ ಮಾಡಲು ಬಿಡಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಘಟನೆಯ ಕುರಿತು ಇಲ್ಲಿವರೆಗೂ ಯಾವುದೇ ದೂರು ದಾಖಲಾಗಿಲ್ಲ. ಅಲ್ಲಿಯ ವಸ್ತು ಸ್ಥಿತಿಯ ಬಗ್ಗೆ ಮಾತ್ರ ವರದಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನನ್ನ ಮನೆ, ಕಚೇರಿ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದು, ಕಾನೂನು ಪರೀಕ್ಷೆ ಎದುರಿಸಲು ಸಿದ್ಧನಿದ್ದೇನೆ. ನನ್ನನ್ನು ಎಲ್ಲರೂ ಟಾರ್ಗೆಟ್ ಮಾಡುತ್ತಾರೆ. ನಾನು ಬೆಳೆಯಬಾರದೆಂಬ ಉದ್ದೇಶ ಇರಬಹುದು ಎಂದು ಆರ್. ಶಂಕರ್ ಅವರು ಬುಧವಾರ ನೋವು ತೋಡಿಕೊಂಡರು.
ಶಂಕರ್ ದುಡ್ಡು ತಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ದುಡ್ಡು ಕೊಟ್ಟವರು, ಆರೋಪ ಮಾಡಿದವರು ಇಬ್ಬರೂ ಧರ್ಮಸ್ಥಳಕ್ಕೆ ಆಣೆ ಮಾಡಲು ಬರಲಿ. ಇವರ ಜತೆಗೆ ಹೋಗಿದ್ದಕ್ಕೆ ಅನರ್ಹ ಪಟ್ಟ ಕಟ್ಟಿದರು ಎಂದು ಕಿಡಿಕಾರಿದರು.
ನನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಇವರ ಸರಕಾರ ಇದ್ದಾಗ ಕಿಮ್ಮತ್ತು ಇಲ್ಲದ ಹಾಗೆ ಮಾಡಿದರು. ಎಷ್ಟೋ ದಿನಗಳ ಕಾಲ ನಾನು ಕಣ್ಣೀರು ಹಾಕಿದ್ದೇನೆ ಎಂದು ಅಳಲು ತೋಡಿಕೊಂಡರು.
ಬಿಜೆಪಿ ಒಪ್ಪಿಕೊಂಡರೆ ಪಕ್ಷದ ಜತೆ ಇರುತ್ತೇನೆ. ಸಹಕಾರ ಕೊಡದಿದ್ದರೆ ನನ್ನ ದಾರಿ ನನಗೆ. ಕಾಂಗ್ರೆಸ್, ಬಿಜೆಪಿ ಯಾರೇ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿ ಆಗಿಯಾದರೂ ಕಣಕ್ಕಿಳಿಯುವುದು ಖಚಿತ. ಬಿಜೆಪಿ ಸರಕಾರ ನನ್ನನ್ನು ಮಂತ್ರಿ ಮಾಡಬಹುದಿತ್ತು. ಒಟ್ಟಿನಲ್ಲಿಇಬ್ಬರೂ ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು.












Click it and Unblock the Notifications