ಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾದ ಜಿಟಿಡಿ ನಡೆ: ಇದು ರಾಜಕೀಯ ತಂತ್ರನಾ?
ಬೆಂಗಳೂರು, ನವೆಂಬರ್ 28: ಜೆಡಿಎಸ್ ಪಕ್ಷದಲ್ಲಿ ಶಾಸಕ ಜಿ.ಟಿ.ದೇವೇಗೌಡ ಮತ್ತು ವರಿಷ್ಠ ಹೆಚ್.ಡಿ.ದೇವೇಗೌಡ ಕುಟುಂಬದ ನಡುವೆ ನಡೆಯುತ್ತಿದ್ದ ಶೀತಲ ಸಮರ ಉಪಚುನಾವಣೆ ಫಲಿತಾಂಶದ ಬಳಿಕ ಜಗಜ್ಜಾಹೀರಾಗಿದೆ. ಪಕ್ಷ ಮತ್ತು ನಾಯಕರಿಂದ ಅಂತರ ಕಾದುಕೊಂಡು ಬಂದಿದ್ದ ಜಿ.ಟಿ.ದೇವೇಗೌಡರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರಲಿಲ್ಲವಾದರೂ ಉಪಸಮರ ಸೋಲಿನ ನಂತರ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿರುವುದನ್ನು ಗಮನಿಸಿದರೆ ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಕಳೆದೊಂದು ದಶಕದಿಂದಲೂ ತಮ್ಮ ಪುತ್ರ ಹೆಚ್.ಡಿ.ಹರೀಶ್ ಗೌಡರನ್ನು ಶಾಸಕನನ್ನಾಗಿ ಮಾಡಬೇಕೆಂಬುದು ಜಿ.ಟಿ.ದೇವೇಗೌಡರ ಅಭಿಲಾಷೆಯಾಗಿತ್ತು. 2018ರ ವಿಧಾನಸಭಾ ಚುನಾವಣೆ ವೇಳೆ ಪುತ್ರನಿಗೆ ಟಿಕೆಟ್ ಕೊಡಿಸಲು ಹರಸಾಹಸ ಮಾಡಿದ್ದರಾದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ವಪಕ್ಷ ಜೆಡಿಎಸ್ ನ ವರಿಷ್ಠರ ವಿರುದ್ಧವೇ ಅಸಮಾಧಾನಗೊಂಡಿದ್ದರು. ಆ ನಂತರ ಸಿದ್ದರಾಮಯ್ಯರ ವಿರುದ್ಧವೇ ಗೆಲುವು ಸಾಧಿಸಿದ್ದು ಅವರ ರಾಜಕೀಯ ಇತಿಹಾಸದಲ್ಲೊಂದು ಮೈಲುಗಲ್ಲು.

ಅವತ್ತು(2018) ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದು ಕಾಂಗ್ರೆಸ್ ಜತೆ ಸೇರಿ ಜೆಡಿಎಸ್ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಜಿ.ಟಿ.ದೇವೇಗೌಡರು ನಿರೀಕ್ಷೆ ಮಾಡಿದ್ದ ಸಹಕಾರ ಖಾತೆಯನ್ನು ನೀಡದೆ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರು. ಆ ಬಗ್ಗೆ ಸಿಎಂ ಆಗಿದ್ದ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊಂದಿದ್ದರೂ ಛಾಲೆಂಜ್ ಆಗಿ ತೆಗೆದುಕೊಂಡು ಖಾತೆಯನ್ನು ನಿಭಾಯಿಸಿದ್ದರು. ಇದಾದ ಬಳಿಕ ಆಪರೇಷನ್ ಕಮಲ ನಡೆದು ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಜಿ.ಟಿ.ದೇವೇಗೌಡರು ತಟಸ್ಥರಾಗಿದ್ದರು.
ಜೆಡಿಎಸ್‌ನಲ್ಲಿದ್ದರೂ ತಟಸ್ಥರಾಗಿದ್ದ ಜಿಟಿಡಿ
ಜೆಡಿಎಸ್ ನಿಂದ ಶಾಸಕರಾಗಿದ್ದರೂ ಆ ಪಕ್ಷದಿಂದ ದೂರವಿದ್ದು ತನ್ನ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದರು. ಜೆಡಿಎಸ್ ನಾಯಕರು ಆಡಳಿತರೂಢ ಬಿಜೆಪಿ ವಿರುದ್ಧ ಉರಿದು ಬೀಳುತ್ತಿದ್ದರೂ ಅವರು ಮಾತ್ರ ತಲೆಕೆಡಿಸಿಕೊಳ್ಳದೆ ಮೌನವಾಗಿದ್ದುಕೊಂಡೇ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡಿಸಿಕೊಂಡು ಬಂದಿದ್ದರು. ಕೆಲವೊಮ್ಮೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದೂ ಇದೆ. ಅವತ್ತಿನ ದಿನಗಳಲ್ಲಿ ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಗಳು ಹರಡಿದ್ದವು.

ಆ ದಿನಗಳಲ್ಲಿ ಅವರ ಉದ್ದೇಶ ಒಂದೇ ಆಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಯಾರು ಟಿಕೆಟ್ ನೀಡಲು ಒಪ್ಪುತ್ತಾರೋ ಅವರ ಕಡೆಗೆ ಒಲವು ತೋರುವುದಾಗಿತ್ತು. ಹೀಗಾಗಿ ಕೊನೆಯ ಅವಧಿಯ ವೇಳೆಗೆ ಅವರ ಒಪ್ಪಂದಕ್ಕೆ ಮಣಿಯುವ ಹಂತಕ್ಕೆ ಕಾಂಗ್ರೆಸ್ ಕೂಡ ಬಂದಿತ್ತು. ಸಿದ್ದರಾಮಯ್ಯ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ವಿಚಾರಗಳು ಅವತ್ತಿನ ದಿನಗಳಲ್ಲಿ ಮುನ್ನಲೆಗೆ ಬಂದಿದ್ದವು.
ಅಂದು ಅಖಾಡಕ್ಕಿಳಿದಿದ್ದ ಹೆಚ್.ಡಿ.ದೇವೇಗೌಡರು
ಆ ಸಮಯದಲ್ಲಿ ಪಕ್ಷ ಗೆದ್ದೇ ಗೆಲ್ಲಬೇಕು, ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬೇಕೆಂಬ ಹಠಕ್ಕೆ ಜೆಡಿಎಸ್ ನವರು ಬಿದ್ದಿದ್ದರು. ಹೆಚ್.ಡಿ.ಕುಮಾರಸ್ವಾಮಿ ಅವರು ಅದಾಗಲೇ ಪ್ರವಾಸ ಕೈಗೊಂಡಾಗಿತ್ತು. ಜಿ.ಟಿ.ದೇವೇಗೌಡರು ಪಕ್ಷ ಬಿಟ್ಟು ಹೋದರೆ ಅದರಿಂದ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಇದು ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ ಅವರು ಇನ್ನು ಅಸಮಾಧಾನ ಮುಂದುವರೆಸಿದರೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದರಿತು ಅಖಾಡಕ್ಕೆ ಇಳಿದು ಬಿಟ್ಟಿದ್ದರು.

ಖುದ್ದು ಜಿ.ಟಿ.ದೇವೇಗೌಡರ ಮನೆಗೆ ತೆರಳಿ ಅವರ ಮನವೊಲಿಸಿ ಅವರ ಬೇಡಿಕೆಯಂತೆ ಮಗ ಜಿ.ಡಿ.ಹರೀಶ್ ಗೌಡರಿಗೆ ಹುಣಸೂರು ಕ್ಷೇತ್ರದಿಂದ ಹಾಗೆಯೇ ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಕೊನೆಯ ಕ್ಷಣದಲ್ಲಿ ಜಿ.ಟಿ.ದೇವೇಗೌಡರು ಅನ್ಯ ಪಕ್ಷಗಳ ಪಾಲಾಗುವುದನ್ನು ತಪ್ಪಿಸಿದ್ದರು. ಅಷ್ಟಕ್ಕೂ ಜಿ.ಟಿ.ದೇವೇಗೌಡರು ಈ ಹಿಂದೆ ಜೆಡಿಎಸ್ ತೊರೆದು ಬಿಜೆಪಿಗೆ ಹೋಗಿದ್ದವರೇ ಆದರೆ ಅಲ್ಲಿ ಸರಿ ಹೋಗದೆ ಮತ್ತೆ ಜೆಡಿಎಸ್ ಗೆ ಬಂದು ಗೆಲುವು ಸಾಧಿಸಿದ್ದರು.
ಜಿ.ಟಿ.ದೇವೇಗೌಡರ ತಟಸ್ಥ ನೀತಿ ತಂತ್ರನಾ?
ಶಾಸಕರಾಗಿದ್ದ ಕಳೆದ ಅವಧಿಯಲ್ಲಿಯೂ ಜೆಡಿಎಸ್ ನಲ್ಲಿದ್ದರೂ ಅಂತರ ಕಾದು ಕೊಂಡಿದ್ದ ಅವರು ಆಡಳಿತದಲ್ಲಿ ಬಿಜೆಪಿ ಪರವಾಗಿಯೇ ಇದ್ದಂತೆ ಗೋಚರಿಸಿದ್ದರು. ಆ ಮೂಲಕ ತಾವೇನು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕೋ ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡಿದ್ದರು. ಈ ಬಾರಿಯ ಅಂದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ತಾವು ಮಾತ್ರವಲ್ಲದೆ, ತಮ್ಮ ಪುತ್ರನನ್ನು ಜೆಡಿಎಸ್ ಪಕ್ಷದಿಂದ ಗೆಲ್ಲಿಸಿಕೊಂಡ ಅವರು ಆರಂಭದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಾದರೂ ತದ ನಂತರ ದೂರ ಸರಿದಿದ್ದರು. ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡ ಜಿ.ಟಿ.ದೇವೇಗೌಡರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ ದಳಪತಿಗಳಿಗೆ ಶಾಕ್ ನೀಡಿದ್ದರು.
ಇದು ಹೆಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮತ್ತೆ ಸಂಬಂಧ ಹಳಸಿದೆ ಎಂಬುದರ ಸಂದೇಶವಾಗಿತ್ತು. ಆ ನಂತರ ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿದ್ದ ಅವರು ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ಹೋಗಲೇ ಇಲ್ಲ. ಫಲಿತಾಂಶ ಬಂದ ಬಳಿಕ ತನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ ಹೀಗಾಗಿ ಹೋಗಲಿಲ್ಲ ಎಂಬ ಹೇಳಿಕೆಯನ್ನು ನೀಡಿದರು. ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಜಿ.ಟಿ.ದೇವೇಗೌಡರು ಜೆಡಿಎಸ್ ನಿಂದ ದೂರವಿದ್ದುಕೊಂಡೇ ತಮ್ಮ ಅಧಿಕಾರವನ್ನು ಮುಗಿಸುವ ಲಕ್ಷಣಗಳು ಕಂಡು ಬಂದಿದೆ.
ಕಳೆದ ಬಾರಿ ಏನು ಮಾಡಿದರೋ ಅದರ ಮುಂದುವರಿದ ಭಾಗವಾಗಿ ಈ ಬಾರಿಯ ಅವರ ನಡೆ ಗೋಚರಿಸುತ್ತಿದೆ. ಇದು ಅವರ ರಾಜಕೀಯ ತಂತ್ರನಾ? ಅದು ಗೊತ್ತಿಲ್ಲ. ಆದರೆ ಅವರ ಈ ನಡವಳಿಗೆ ಸ್ವಪಕ್ಷದ ಅದರಲ್ಲೂ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತು ನಿಜ. ಈ ಬೆಳವಣಿಗೆಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆ ಎಂಬುದನ್ನು ಕಾಲವೇ ಹೇಳಬೇಕಿದೆ.












Click it and Unblock the Notifications