ಮೈಸೂರು ಜಿ.ಪ ಚುನಾವಣೆ: ಕಾಂಗ್ರೆಸ್ಸಿಗೆ ಬಿಸಿಮುಟ್ಟಿಸಿ ಕೊನೆಗೆ ಒಪ್ಪಿಕೊಂಡ ಗೌಡ್ರು

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಯ ಸಂಬಂಧ ಚೌಕಾಸಿ ಮುಂದುವರಿದಿದೆ. ಜೆಡಿಎಸ್ ತುಸು ಜಾಸ್ತಿಯೇ ಚೌಕಾಸಿ ಮಾಡುತ್ತಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ವಾದ.
ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೆಡಿಎಸ್ ಮೈತ್ರಿಗೂ ಸರಿ, ಫ್ರೆಂಡ್ಲಿ ಫೈಟಿಗೂ ಸರಿ ಎಂದು ಹೇಳುತ್ತಿದೆ. 'ವಿ ಆರ್ ನಾಟ್ ಬೆಗ್ಗರ್ಸ್' ಎಂದು ಕುಮಾರಸ್ವಾಮಿ ಸೀಟು ಹಂಚಿಕೆ ಸಂಬಂಧ ಹೇಳಿಕೆಯನ್ನು ನೀಡಿದ್ದು ಗೊತ್ತೇ ಇದೆ. ಆಮೇಲೆ, ಮಾಧ್ಯಮದವರು ಅದನ್ನು ತಿರುಚಿದ್ದಾರೆಂದು ಗೂಬೆ ಬೇರೆ ಕೂರಿಸಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುವ ಮೂಲಕ, ಬೆಂಗಳೂರು ರಾಜಕೀಯ ಬೇರೆ, ಮೈಸೂರು ರಾಜಕೀಯ ಇನ್ನೊಂದು ಎಂದು ಸಾರುವತ್ತ ಅಲ್ಲಿನ ರಾಜಕೀಯ ಸಾಗುತ್ತಿತ್ತು. ಆದರೆ, ಶುಕ್ರವಾರ (ಫೆ 22) ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮತ್ತೆ ಒಂದಾಗಲಿದೆ ಎನ್ನುವ ಸುದ್ದಿಯಿದೆ.
ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಗರಂ
ಬಿಜೆಪಿ ಜೊತೆ ಹಿಂದೆನೇ ಮಾಡಿಕೊಂಡಿರುವ ಒಪ್ಪಂದ ಎಂದು ಜೆಡಿಎಸ್ ಕೆಲವು ದಿನಗಳಿಂದ ಸ್ಪಷ್ಟೀಕರಣ ನೀಡುತ್ತಿದ್ದರೂ, ದೇವೇಗೌಡರ ಲೆಕ್ಕಾಚಾರ ಇದರ ಹಿಂದೆ ಬೇರೆಯೇ ಇತ್ತು ಎಂದು ಹೇಳಲಾಗುತ್ತಿದೆ. ಮೈಸೂರು ಜಿ.ಪಂಚಾಯತ್ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಗೌಡ್ರು ಮನಸ್ಸು ಬದಲಾಯಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಿದ್ದರೆ, ಗೌಡ್ರ ಉದ್ದೇಶ ಏನಾಗಿತ್ತು?

ಸುಮಲತಾ ಕಣಕ್ಕಿಳಿಸುವ ಬಗ್ಗೆ, ಸಿದ್ದರಾಮಯ್ಯ ಆಲೋಚನೆ
ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯ ಗೊಂದಲ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮುಂದುವರಿದಿರುವ ನಡುವೆ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ, ಸಿದ್ದರಾಮಯ್ಯ ಆಲೋಚಿಸುತ್ತಿರುವುದು ಇನ್ನೊಂದೆಡೆ. ಆ ಕಾರಣಕ್ಕಾಗಿಯೇ, ಫ್ರೆಂಡ್ಲಿ ಫೈಟಿಗೆ ನಾವು ಸಿದ್ದ ಎಂದು ರೇವಣ್ಣ ಹೇಳುತ್ತಿರುವುದು. ಜೊತೆಗೆ, ಮೈಸೂರು ಜಿಲ್ಲಾ ಪಂಚಾಯತಿ ಚುನಾವಣೆಯನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ಸಿಗೆ ವಾರ್ನಿಂಗ್ ನೀಡುವ ಉದ್ದೇಶ ಗೌಡ್ರು ಹೊಂದಿದ್ದರು ಎಂದು ಹೇಳಲಾಗುತ್ತಿದೆ.

ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ನಿರ್ಧಾರ
ಬಿಜೆಪಿ ಜತೆಗಿನ ಮೈತ್ರಿ ಮುಂದುವರೆಸಿ ಪೂರ್ಣ ಐದು ವರ್ಷಗಳ ಅವಧಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ನಿರ್ಧರಿಸಿತ್ತು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಪಸ್ವರಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿದ್ದರೂ, ಜಿಲ್ಲಾ ಪಂಚಾಯಿತಿಯಲ್ಲಿ ಮೈತ್ರಿ ಬೇಡ ಎನ್ನುವ ತೀರ್ಮಾನಕ್ಕೆ ಸ್ಥಳೀಯ ಮುಖಂಡರು ಬಂದಿದ್ದರು. ಶುಕ್ರವಾರ ತಡರಾತ್ರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದ್ದರೂ, ಶನಿವಾರ ನಡೆಯುವ ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮಾಹಿತಿಯಿದೆ.

ಜೆಡಿಎಸ್ ಮುಖಂಡರಿಗೆ ಸಿದ್ದು ಮೇಲಿನ ಮುನಿಸು ಕಮ್ಮಿಯಾದಂತಿಲ್ಲ
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದರೂ, ಜೆಡಿಎಸ್ ಮುಖಂಡರಿಗೆ ಸಿದ್ದರಾಮಯ್ಯನವರ ಮೇಲಿನ ಮುನಿಸು ಕಮ್ಮಿಯಾದಂತಿಲ್ಲ. ಅದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯೆಂದರೆ, ಮೈಸೂರು ಜಿಲ್ಲೆ ಸಾಲುಂಡಿ ಗ್ರಾಮಸ್ಥರ ಸಮಸ್ಯೆ ಆಲಿಸಲು ಸಚಿವ ಜಿ ಟಿ ದೇವೇಗೌಡರು ಹೋಗಿದ್ದಾಗ, ನೀವು ಸಿದ್ದರಾಮಯ್ಯನವರಿಗೆ ವೋಟ್ ಹಾಕಿದವರು, ನಿಮ್ಮ ಸಮಸ್ಯೆ ಕೇಳೋಕೆ ನನಗೆ ಮತ ಹಾಕಿದ್ದೀರಾ ಎಂದು ಗದರಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಈಗಲೂ ಮನಸ್ಸಿಲ್ಲ.

ಸಿದ್ದರಾಮಯ್ಯನವರ ತವರೂರಿನಲ್ಲಿ ಕಾಂಗ್ರೆಸ್ ಹೊರತಾದ ಮೈತ್ರಿ
ಸಿದ್ದರಾಮಯ್ಯನವರ ತವರೂರಿನಲ್ಲಿ ಕಾಂಗ್ರೆಸ್ ಹೊರತಾದ ಮೈತ್ರಿ ಮಾಡುವ ಮೂಲಕ, ಅವರಿಗೆ ಟಾಂಗ್ ಕೊಡುವ ನಿರ್ಧಾರಕ್ಕೆ ದೇವೇಗೌಡರು ಬಂದಿದ್ರಾ ಎನ್ನುವುದು ಈಗ ಚರ್ಚೆಯ ವಿಷಯ. ಅದೇ ಕಾರಣಕ್ಕೆ ಮೈಸೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು, ನಂತರ ಕಾಂಗ್ರೆಸ್ ತನ್ನ ಮನೆಬಾಗಿಲಿಗೆ ಬರಲಿ, ಆಮೇಲೆ ಮೈತ್ರಿಗೆ ಒಪ್ಪಿಕೊಳ್ಳೋಣ ಎನ್ನುವ ನಿಲುವನ್ನು ದೇವೇಗೌಡ್ರು ಹೊಂದಿದ್ದರೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಆ ಮೂಲಕ, ಸಿದ್ದರಾಮಯ್ಯನವರನ್ನು ಮುಂಬರುವ ಲೋಕಸಭಾ ಚುನಾವಣೆಯವರೆಗಾದರೂ ಹಣೆಯಲು ಗೌಡ್ರು ನಿರ್ಧರಿಸಿದಂತಿತ್ತು.

ಸಾರ್ವತ್ರಿಕ ಚುನಾವಣೆಯ ಸೀಟು ಹೊಂದಾಣಿಕೆ ಮುರಿದು ಬೀಳುತ್ತಾ?
ಒಟ್ಟಾರೆಯಾಗಿ ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ರಾಜಕೀಯ ನಡೆಯುತ್ತಿರುವುದನ್ನು ನೋಡಿದರೆ, ಜೆಡಿಎಸ್ ಅವರದ್ದು ಬೆಂಗಳೂರಿನಲ್ಲೊಂದು ರಾಜಕೀಯ ಮತ್ತು ಮೈಸೂರಿನಲ್ಲಿ ಇನ್ನೊಂದು ರಾಜಕೀಯ ಮಾಡಲು ಹೊರಟಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಈ ವಿಚಾರವನ್ನು ಇಟ್ಟುಕೊಂಡು, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಹೆಚ್ಚಿನ ಸೀಟು ಗಿಟ್ಟಿಸಿಕೊಳ್ಳಲು ಗೌಡ್ರು ಯಶಸ್ವಿಯಾಗುತ್ತಾರಾ ಎಂದು ಕಾದು ನೋಡಬೇಕಿದೆ.