ಕರಾವಳಿ ಭಾಗದಲ್ಲಿ ರೈಲ್ವೆ ಕೋಚ್‌ಗಳಿಗೆ ನೀರು ತುಂಬಿಸುವ ಸೌಲಭ್ಯ: ಕೊಂಕಣ ರೈಲ್ವೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ
ಕರಾವಳಿ ಕರ್ನಾಟಕದ ಯಾವುದೇ ರೈಲ್ವೆ ನಿಲ್ದಾಣಗಳಲ್ಲಿ ಕೋಚ್‌ಗಳಿಗೆ ನೀರು ತುಂಬಿಸುವ (Coach Watering) ಸೌಲಭ್ಯವಿಲ್ಲದ ಕಾರಣ, ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಅಥವಾ ಕುಂದಾಪುರದಲ್ಲಿ ತಕ್ಷಣವೇ ತಾತ್ಕಾಲಿಕ ನೀರು ತುಂಬಿಸುವ ಸೌಲಭ್ಯವನ್ನು ಕಲ್ಪಿಸುವಂತೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ಗೆ (ಕೆಆರ್‌ಸಿಎಲ್) ಆಗ್ರಹಿಸಿದ್ದಾರೆ.
ಕರಾವಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕಾರವಾರದವರೆಗೆ ಮಾತ್ರ ಓಡಿಸುವ ಬೇಡಿಕೆಯಿತ್ತು. ಆದರೆ, ಮಂಗಳೂರು ಜಂಕ್ಷನ್‌ನಿಂದ ಕಾರವಾರದವರೆಗಿನ ಯಾವುದೇ ನಿಲ್ದಾಣದಲ್ಲಿ ಕೋಚ್‌ಗಳಿಗೆ ನೀರು ತುಂಬಿಸುವ ಸೌಲಭ್ಯವಿಲ್ಲದ ಕಾರಣ, ರೈಲ್ವೆ ಸಚಿವಾಲಯವು ಅನಿವಾರ್ಯವಾಗಿ ಇದನ್ನು ಮಡಗಾಂವ್‌ವರೆಗೆ ವಿಸ್ತರಿಸಲು ಯೋಜಿಸಿದೆ. ರೈಲ್ವೆ ಕೋಚ್‌ಗಳಿಗೆ ನೀರು ತುಂಬಿಸುವ ಸೌಲಭ್ಯದ ಕೊರತೆಯು ವಿಶೇಷ ರೈಲುಗಳನ್ನು ಓಡಿಸಲು ಮತ್ತು ಸದ್ಯ ಇರುವ ರೈಲುಗಳನ್ನು ವಿಸ್ತರಿಸಲು ದೊಡ್ಡ ಅಡಚಣೆಯಾಗಿದೆ.

ಕೊಂಕಣ ರೈಲ್ವೆಗೆ ಪತ್ರ
ಕಾಸರಗೋಡು ರೈಲ್ವೆ ನಿಲ್ದಾಣದ ಮಾದರಿಯಲ್ಲೇ ಸುಮಾರು ₹15-20 ಲಕ್ಷ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿ, ತುರ್ತು ಆಧಾರದ ಮೇಲೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಬೇಕು ಎಂದು ಕೊಂಕಣ ರೈಲ್ವೆಯ ಅಧ್ಯಕ್ಷ ಸಂತೋಷ್ ಕುಮಾರ್ ಝಾ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.
ಸದ್ಯಕ್ಕೆ ಈ ವಲಯದಲ್ಲಿ ನೀರು ತುಂಬಿಸುವ ಸೌಲಭ್ಯವಿಲ್ಲದಿರುವುದು ವಿಶೇಷ ರೈಲು ಅಥವಾ ವಿಸ್ತರಿಸಿದ ರೈಲುಗಳ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಪ್ರಯಾಣಿಕರಿಗೂ ಅನಾನುಕೂಲ ಉಂಟುಮಾಡುತ್ತಿದೆ. ಕಾಯಂ ಮೂಲಸೌಕರ್ಯ ನಿರ್ಮಾಣಕ್ಕೆ ಸಮಯ ಬೇಕಾಗುವುದರಿಂದ ತಾತ್ಕಾಲಿಕ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ವಿಳಂಬ
ಮಂಗಳೂರು ಜಂಕ್ಷನ್ ಮತ್ತು ಕಾರವಾರದ ನಡುವಿನ ಯಾವುದೇ ನಿಲ್ದಾಣಗಳಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ, ಕರಾವಳಿ ವಂದೇ ಭಾರತ್ ರೈಲನ್ನು ಮಡಗಾಂವ್‌ವರೆಗೆ ಯೋಜಿಸಬೇಕಾದ ಅನಿವಾರ್ಯತೆ ಸಚಿವಾಲಯಕ್ಕೆ ಎದುರಾಗಿದೆ. ಕಳೆದ ನವೆಂಬರ್ 5ರಂದು ಸಂಸದರು ಪತ್ರ ಬರೆದು ಬೆಂಗಳೂರು ಮತ್ತು ಕುಂದಾಪುರ ನಡುವೆ ವಂದೇ ಭಾರತ್ ರೈಲು ಆರಂಭಿಸುವ ನಿರೀಕ್ಷೆಯಲ್ಲಿ ಕುಂದಾಪುರ ನಿಲ್ದಾಣದಲ್ಲಿ ಲೊಕೊ ಪೈಲಟ್ ರೂಮ್, ನೀರಿನ ಸೌಲಭ್ಯ ಮತ್ತು ಹೌಸ್‌ಕೀಪಿಂಗ್ ವ್ಯವಸ್ಥೆಗಳನ್ನು ಕಲ್ಪಿಸಲು ಕೋರಿದ್ದರು. ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದ ವಿದ್ಯುದೀಕರಣ ಪೂರ್ಣಗೊಂಡ ನಂತರ ಕರಾವಳಿ ವಂದೇ ಭಾರತ್ ಆರಂಭವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.
ಡಿಸೆಂಬರ್ 2ರಂದು ಸಂಸದರಿಗೆ ಉತ್ತರಿಸಿದ್ದ ಕೆಆರ್‌ಸಿಎಲ್ ಅಧ್ಯಕ್ಷರು, ಕುಂದಾಪುರದಿಂದ ವಂದೇ ಭಾರತ್ ಆರಂಭಿಸಲು ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಅನುಕೂಲಗಳಿಲ್ಲ ಎಂದು ತಿಳಿಸಿದ್ದರು. ಕುಂದಾಪುರ ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 1,057 ಪ್ರಯಾಣಿಕರಿದ್ದು, ಮಂಗಳೂರು-ಮಡಗಾಂವ್ ವಂದೇ ಭಾರತ್ ಕೂಡ ಕೇವಲ ಶೇ 34ರಷ್ಟು ಆಕ್ಯುಪೆನ್ಸಿಯೊಂದಿಗೆ ಓಡುತ್ತಿದೆ ಎಂದು ಹೇಳಿದ್ದರು. ಆದರೆ ರೈಲು ಓಡಿಸುವ ಅಂತಿಮ ನಿರ್ಧಾರ ರೈಲ್ವೆ ಸಚಿವಾಲಯಕ್ಕೆ ಸೇರಿದೆ. ಈ ಬೆಳವಣಿಗೆಯಿಂದಾಗಿ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಸಿಗುವ ನಿರೀಕ್ಷೆ ಮೂಡಿದೆ.












Click it and Unblock the Notifications