ಗೌರಿ ಹಬ್ಬದಂದೇ ಸರ್ಕಾರದಿಂದ ಸಿಹಿಸುದ್ದಿ; ಏನದು?
ರಾಜ್ಯ ಸರ್ಕಾರವು ಈ ಗೌರಿ ಹಬ್ಬದಂದು ಮಹತ್ವದ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಹಾಗೂ ಕೆರೆಗಳನ್ನು ತುಂಬಿಸುವ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಹಬ್ಬದ ದಿನದಂದೇ ಉದ್ಘಾಟಿಸಲು ನಿರ್ಧರಿಸಿದೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಹಿತಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಇದೇ ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಯ ಜನರು ಈ ಯೋಜನೆ ಬರುವಿಕೆಗಾಗಿ ಹಲವು ವರ್ಷಗಳಿಂದ ಕಾದು ಕುಳಿತಿದ್ದಾರೆ. ಈ ಯೋಜನೆಗಾಗಿ ಅನೇಕ ನಾಯಕರು ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ ಎಂದಿದ್ದಾರೆ.
ಕಳೆದ ವರ್ಷದಿಂದ ಈ ಯೋಜನೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಈ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥವಾಗಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದೆ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿ, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿದು ಹೋಗಲಿದೆ ಎಂದು ಹೇಳಿದ್ದಾರೆ.

ಈ ಯೋಜನೆಯ ಫಲಾನುಭವಿ ಜಿಲ್ಲೆಗಳ ಜನರೆಲ್ಲ ಎತ್ತಿನ ಹೊಳೆ ನೀರಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರು ಹಾಗೂ ರೈತರನ್ನು ಆಹ್ವಾನಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ನಮ್ಮ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಮುಗಿದಿದೆ. ಈಗ ಅದೇ ಸ್ಥಾನವನ್ನು ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅಲಂಕರಿಸಿದ್ದಾರೆ. ಗಾಂಧೀಜಿ ಅವರ ಮಾರ್ಗದರ್ಶನ ವಿಶ್ವವೇ ಹಬ್ಬಿದೆ. ಇದನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು. ಇದಕ್ಕಾಗಿ ಸರ್ಕಾರದಿಂದ ಒಂದು ಕಾರ್ಯಕ್ರಮ ರೂಪಿಸುವ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆದಿದೆ ಎಂದಿದ್ದಾರೆ.
ಕೋವಿಡ್ ಹಗರಣದ ಕುರಿತಾದ ಜಸ್ಟೀಸ್ ಡಿ.ಕುನ್ಹಾ ಅವರ ತನಿಖಾ ವರದಿ ಸಲ್ಲಿಕೆ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ಕುನ್ಹಾ ಅವರ ವರದಿಯಲ್ಲಿ ಏನಿದೆ ಎಂದು ನನಗೆ ಈವರೆಗೂ ಗೊತ್ತಿಲ್ಲ. ಈ ಬಗ್ಗೆ ಬಿಜೆಪಿ ಸಂಸದ ಸುಧಾಕರ್ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯೂ ನನಗಿಲ್ಲ. ಇದರ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ ಎಂದಿದ್ದಾರೆ.
ರಾಜಭವನದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಯಾವುದೇ ಪ್ರಾಸಿಕ್ಯೂಷನ್‌ಗೆ ನನಗೆ ಮನವಿ ಬಂದಿಲ್ಲ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೂ ಅದೇ ಪ್ರಶ್ನೆ ಕಾಡುತ್ತಿದೆ. ಈ ವಿಚಾರವಾಗಿ ಮಾಹಿತಿ ಪಡೆಯುತ್ತೇವೆ. ನಮಗೆ ಸಿಕ್ಕ ಮಾಹಿತಿಗಳ ಆಧರಿಸಿ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ.












Click it and Unblock the Notifications