ಸರ್ಕಾರಿ ಕಚೇರಿಯೊಳಗೆ ಮಧ್ಯವರ್ತಿಗಳನ್ನು ಬಿಟ್ಟುಕೊಳ್ಳಬೇಡಿ: ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಬೆಂಗಳೂರು: "ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಅಧಿಕಾರಿಗಳು ಜನಸಾಮಾನ್ಯರ ಕಡತಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ವಿಲೇವಾರಿ ಮಾಡಬೇಕು. ವಿಳಂಬ ನೀತಿಯೇ ಭ್ರಷ್ಟಾಚಾರಕ್ಕೆ ಮೂಲ ಕಾರಣ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಒಕ್ಕೂಟ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷ ಆಡಳಿತ ಮತ್ತು ಜನಸೇವೆಯ ಕುರಿತು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಕೆಎಎಸ್ ಅಧಿಕಾರಿಗಳ ಸಂಘಕ್ಕೆ 100 ವರ್ಷಗಳ ಸುದೀರ್ಘ ಇತಿಹಾಸವಿದೆ. ಮೈಸೂರು ರಾಜ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದವರೇ ಈ ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಹೆಮ್ಮೆಯ ವಿಷಯ. ಅಂದಿನ ದಕ್ಷ ಅಧಿಕಾರಿಗಳ ಆಡಳಿತ ನಮಗೆ ದಾರಿದೀಪವಾಗಬೇಕು. ಅಧಿಕಾರಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ದುರ್ಬಲ ವರ್ಗದವರಿಗೆ ಸ್ಪಂದಿಸಿ
ಪ್ರಜಾಪ್ರಭುತ್ವದ ಯಶಸ್ಸು ಕಾರ್ಯಾಂಗ ಮತ್ತು ಶಾಸಕಾಂಗದ ಸಮನ್ವಯದ ಮೇಲಿದೆ. ನಾವೆಲ್ಲರೂ ಜನರ ಪ್ರತಿನಿಧಿಗಳು. ಜನರ ಹಿತವನ್ನು ಕಾಪಾಡುವುದು ನಮ್ಮ ಮೊದಲ ಕರ್ತವ್ಯ. ಅಸಮಾನತೆ ಇರುವ ಸಮಾಜದಲ್ಲಿ ದುರ್ಬಲ ವರ್ಗದವರಿಗೆ ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿ. ಕೇವಲ ಕಾನೂನಿನ ಅರಿವಿದ್ದರೆ ಸಾಲದು, ಬಡವರ ಬಗ್ಗೆ ಕಾಳಜಿ ಮತ್ತು ಸಮಾಜದ ಬಗ್ಗೆ ಅರಿವಿದ್ದಾಗ ಮಾತ್ರ ಜನರ ನೋವಿಗೆ ಸ್ಪಂದಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಯೋಜನೆಗಳಿಂದ ಮಧ್ಯವರ್ತಿಗಳಿಗೆ ಮುಕ್ತಿ
ಸರ್ಕಾರದ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ತಲುಪುತ್ತಿದೆ. ಇದೇ ಮಾದರಿಯಲ್ಲಿ ಅಧಿಕಾರಿಗಳು ಕೂಡ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಬಗೆಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಕೆಲಸದ ಅವಧಿ ಮುಗಿದು ನಿವೃತ್ತರಾದಾಗ, 'ನಾನು ಜನರಿಗಾಗಿ ಸಾರ್ಥಕ ಸೇವೆ ಸಲ್ಲಿಸಿದ್ದೇನೆ' ಎಂಬ ತೃಪ್ತಿ ನಿಮ್ಮಲ್ಲಿರಬೇಕು. ಜನರ ಮೆಚ್ಚುಗೆಗಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದಿಲ್ಲ. ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ಆಗಾಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿಇಒಗಳಾಗಿ ಬಡ್ತಿ ಭರವಸೆ
ಇದೇ ವೇದಿಕೆಯಲ್ಲಿ ಕೆಎಎಸ್ ಅಧಿಕಾರಿಗಳ ದೀರ್ಘಕಾಲದ ಬೇಡಿಕೆಯಾದ ಪದೋನ್ನತಿ ಬಗ್ಗೆಯೂ ಮುಖ್ಯಮಂತ್ರಿಗಳು ಶುಭಸುದ್ದಿ ನೀಡಿದರು. ಕಂದಾಯ ಸಚಿವರು ಈ ಬಗ್ಗೆ ಈಗಾಗಲೇ ಕಾರ್ಯೋನ್ಮುಖರಾಗಿದ್ದು, ಶೀಘ್ರದಲ್ಲೇ ಬಡ್ತಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ಶೇ 33ರಷ್ಟು ಅಧಿಕಾರಿಗಳಿಗೆ ಸಿಇಒಗಳಾಗಿ ಬಡ್ತಿ ನೀಡಲು ಸರ್ಕಾರ ಅಗತ್ಯ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು.












Click it and Unblock the Notifications