ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ; ಜೂನ್ 13ಕ್ಕೆ ಮೊದಲ ಸಂಪುಟ ಸಭೆ
ಬೆಂಗಳೂರು, ಜೂನ್ 08; ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ವಾಪಸ್ ಪಡೆಯಲಾಗಿದೆ. ಸರ್ಕಾರಿ ಆಡಳಿತ ಯಂತ್ರ ಮತ್ತೆ ಕಾರ್ಯ ಆರಂಭಿಸಿದ್ದು, ಸರ್ಕಾರಗಳು ಸಹ ಪ್ರಮುಖ ತೀರ್ಮಾನ ಕೈಗೊಳ್ಳಲು ಅನುಕೂಲವಾಗಿದೆ.
ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್. ಲೋಕಸಭೆ ಚುನಾವಣೆ 2024ರಲ್ಲಿ ಪಕ್ಷ ರಾಜ್ಯದ 28 ಕ್ಷೇತ್ರಗಳ ಪೈಕಿ 9ರಲ್ಲಿ ಜಯಗಳಿಸಿದೆ. ಪ್ರತಿಪಕ್ಷವಾದ ಬಿಜೆಪಿ 17, ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿವೆ. ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸೀಟುಗಳು ಪಕ್ಷಕ್ಕೆ ಲಭ್ಯವಾಗಿಲ್ಲ.

ಚುನಾವಣೆ ಫಲಿತಾಂಶ ಪ್ರಕಟಗೊಂಡು, ಮಾದರಿ ಚುನಾವಣಾ ನೀತಿ ಸಂಹಿತೆ ವಾಪಸ್ ಪಡೆದ ಬಳಿಕ ಮೊದಲ ಸಚಿವ ಸಂಪುಟ ಸಭೆ ಜೂನ್ 13ರಂದು ನಡೆಯಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಹಲವು ಪ್ರಮುಖ ವಿಚಾರಗಳ ಚರ್ಚೆ: ಜೂನ್ 13ರ ಗುರುವಾರ ಸಚಿವ ಸಂಪುಟ ಸಭೆ ನಡೆಸುವ ಕುರಿತು ಆರ್. ಚಂದ್ರಶೇಖರ್, ಸರ್ಕಾರದ ಜಂಟಿ ಕಾರ್ಯದರ್ಶಿ (ಸಚಿವ ಸಂಪುಟ) ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟದ 2024ನೇ ಸಾಲಿನ 9ನೇ ಸಭೆಯ ಸೂಚನಾ ಪತ್ರ ಎಂಬ ವಿಷಯವನ್ನು ಪ್ರಕಟಣೆ ಒಳಗೊಂಡಿದೆ. ದಿನಾಂಕ 13/06/2024ರ ಗುರುವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 9ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ, ಒಟ್ಟು 17 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಬಳಿಕ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆ ಫಲಿತಾಂಶ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಕುರಿತು ಸಿದ್ದರಾಮಯ್ಯ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಸುಮಾರು 94.73 ಕೋಟಿ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆಯೂ ಭಾರೀ ಚರ್ಚೆಯಾಗುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.
ರಾಜ್ಯದ ಹಲವು ಯೋಜನೆಗಳು, 2024-25ನೇ ಸಾಲಿನ ಬಜೆಟ್ ಘೋಷಣೆಗಳ ಅನುಷ್ಠಾನ, ಗ್ಯಾರಂಟಿ ಯೋಜನೆಗಳು, ವಿವಿಧ ಟೆಂಡರ್‌ಗೆ ಒಪ್ಪಿಗೆ ನೀಡುವುದು, ವಿವಿಧ ನೇಮಕಾತಿಗಳಿಗೆ ಒಪ್ಪಿಗೆ ಸೇರಿದಂತೆ ಹಲವು ವಿಚಾರಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿವೆ.
ಸಾಮಾನ್ಯವಾಗಿ ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯುತ್ತದೆ. ಆದರೆ ಲೋಕಸಭೆ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಸಚಿವ ಸಂಪುಟ ಸಭೆಗಳನ್ನು ನಡೆಸಿಲ್ಲ.
ಮಾರ್ಚ್ 16ರಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದ್ದರಿಂದ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಬೇಕಿದ್ದ 2024-25ನೇ ಸಾಲಿನ ಬಜೆಟ್‌ನ ಘೋಷಣೆಗಳು ಕೂಡಾ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಹಲವು ವಿಚಾರಗಳ ಕುರಿತು ಚರ್ಚೆ ನಡೆದು, ಸಂಪುಟ ಅನುಮೋದನೆ ನೀಡಬೇಕಿದೆ.
ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಸರ್ಕಾರಿ ಬಸ್‌ಗಳ ದರಗಳನ್ನು ಪರಿಷ್ಕರಣೆ ಮಾಡುವ ಪ್ರಸ್ತಾವನೆ ನಿಗಮಗಳಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 2020ರ ಬಳಿಕ ಪ್ರಯಾಣ ದರವನ್ನು ಏರಿಕೆ ಮಾಡಿಲ್ಲ. ಈ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಜೂನ್ 12ರ ತನಕ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿತ್ತು. ಜೂನ್ 13ರಂದು ಸಚಿವ ಸಂಪುಟ ಸಭೆ ನಡೆಯುವುದರಿಂದ ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡುವ ಗಡುವು ವಿಸ್ತರಣೆ ಅಥವ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.












Click it and Unblock the Notifications