MUDA case: ಆನೆಬಲ ಕೊಟ್ಟ ಹೈಕಮಾಂಡ್‌ಗೆ ಥ್ಯಾಂಕ್ಸ್ ಎಂದ ಸಿಎಂ
ಬೆಂಗಳೂರು, ಆಗಸ್ಟ್ 24: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸುರುಳಿಯಂತೆ ಸುತ್ತಿಕೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರರಾಜಧಾನಿ ದೆಹಲಿ ಅಂಗಳ ತಲುಪಿ, ಹೈಕಮಾಂಡ್ ಜೊತೆ ಸುದೀರ್ಘ ಚರ್ಚೆ ಮಾಡಿ ಬಂದಿದ್ದಾರೆ. ದೆಹಲಿ ಪ್ರವಾಸ ಮುಗಿಸಿ ಬಂದ ಕೂಡಲೇ ಅವರು ಹೈಕಮಾಂಡ್‌ಗೆ ಧನ್ಯವಾದ ತಿಳಿಸಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಎದುರಾಗಿರುವ ಮುಡಾ ಕೇಸ್ ಬಗ್ಗೆಯೂ ಸುಧೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನಮ್ಮ ಹೈಕಮಾಂಡ್ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆಯವರಿಗೆ, ರಾಹುಲ್ ಗಾಂಧಿಯವರಿಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೆ ನನ್ನ ಧನ್ಯವಾದಗಳು. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ರಾಜ್ಯಪಾಲರು ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪಕ್ಷಪಾತ ಧೋರಣೆಯ ಬಗ್ಗೆ ಇಂದಿನ ಸಭೆಯಲ್ಲಿ ವಿವರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ʼರಾಜ್ಯಪಾಲರ ನಿರ್ಣಯದ ವಿರುದ್ಧ ನಾನು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ, ನನಗೆ ನ್ಯಾಯ ವ್ಯವಸ್ಥೆಯಲ್ಲಿ, ಈ ನೆಲದ ಕಾನೂನಿನಲ್ಲಿ ನಂಬಿಕೆಯಿದೆ. ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಣಯ ಅಸಾಂವಿಧಾನಿಕ ಮತ್ತು ಕಾನೂನು ಬಾಹಿರವಾಗಿದ್ದು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆಯಿದೆ. ನನ್ನ ಬೆಂಬಲಕ್ಕೆ ನಿಂತಿರುವ ಪಕ್ಷದ ಹೈಕಮಾಂಡ್‌ಗೆ ಮತ್ತೊಮ್ಮೆ ಧನ್ಯವಾದಗಳು' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ನಿನ್ನೆ ಚರ್ಚೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಷಡ್ಯಂತ್ರವನ್ನು ಕಾನೂನು ಹಾಗೂ ರಾಜಕೀಯ ಹೋರಾಟದ ಮೂಲಕವೇ ಎದುರಿಸಬೇಕು ಎಂದು ಹೈಕಮಾಂಡ್‌ನ ಸೂಚಿಸಿದೆಯಂತೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಈ ಪ್ರಕರಣದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಾವೆಲ್ಲ ನಿಂತಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಐದು ಗ್ಯಾರಂಟಿಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಲೇ ಇದೆ. ಇದು ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮೇಲಿನ ದಾಳಿ ಅಲ್ಲ. ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವನ್ನು ಉರುಳಿಸಲು ನಡೆಸುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸುತ್ತೇವೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬೇಕು ಎನ್ನುವ ಪ್ರಯತ್ನದ ವಿರುದ್ಧ ʼಇಂಡಿಯಾʼ ಮೈತ್ರಿಕೂಟದಿಂದ ಹೋರಾಟ ನಡೆಸುವ ಯೋಜನೆಯೂ ಇದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಮುಡಾ ಹಗರಣದ ವಿಚಾರದಲ್ಲಿ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವುದರಿಂದ ಆನೆಬಲ ಬಂದಂತಾಗಿದೆ.











Click it and Unblock the Notifications