Industry: ಕೈಗಾರಿಕೆ ವಲಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಣೆ ಆಗಿದ್ದೇನು?
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಸರ್ಕಾರವು ರಾಜ್ಯದ ಕೈಗಾರಿಕೆ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡದಿದ್ದರು ಸಹಿತ ಪೂರಕ ವಾತಾವರಣಕ್ಕಾಗಿ ಹೊಸ ನೀತಿ ಜಾರಿಗೆ ನಿರ್ಧರಿಸಿದೆ.. ಈ ಮೂಲಕ ಭಾರೀ ಬಂಡವಾಳ ಆಕರ್ಷಣೆಗೆ ಸರ್ಕಾರ ಪ್ಲಾನ್ ಮಾಡಿದೆ.
ಬಜೆಟ್ ಮಂಡನೆ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಕರ್ನಾಟಕ ಸರ್ಕಾರವು 2023-24ನೇ ಸಾಲಿನಲ್ಲಿ ಸುಮಾರು 88,150 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ. ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕದ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು ಎಂದರು.

ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ತಯಾರಿಕಾ ವಲಯ, ಆಟೊಮೊಬೈಲ್, ಡೇಟಾ ಸೆಂಟರ್ ಮತ್ತಿತರ ವಲಯಗಳಲ್ಲಿ ಈ ಹೂಡಿಕೆಗಳನ್ನು ಮಾಡಲಾಗುತ್ತಿದೆ.
ಬೆಂಗಳೂರು ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ Knowledge Health Care, Innovation and Research City (KHIR) ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ಯೋಜನೆಯಿಂದ ಅಂದಾಜು 40,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80,000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.

2025ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ
ರಾಜ್ಯಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಫೆಬ್ರವರಿ 2025ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು (Global Investor's Meet) ಆಯೋಜಿಸಲಾಗುವುದು. ಇದು ಬಂಡವಾಳ ಹರಿದು ಬರುವಂತೆ ಮಾಡಲಿದೆ. ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಎಂ.ಎಸ್.ಐ.ಎಲ್. ವತಿಯಿಂದ ಚಿಟ್‌ಫಂಡ್ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಯಶವಂತಪುರದಲ್ಲಿ ಕೆ.ಎಸ್.ಡಿ.ಎಲ್ ವತಿಯಿಂದ ಜಮೀನಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಛೇರಿ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಕೈಗಾರಿಕೆ ಸರ್ಕಾರ ನೀಡಿದ ಆದ್ಯತೆ ಕುರಿತು ಸಿದ್ದರಾಮಯ್ಯ ವಿವರಿಸಿದರು.












Click it and Unblock the Notifications