Bangalore Mysore Expressway: ಹೆದ್ದಾರಿ ಅಪಘಾತಗಳಿಗೆ ಸಿಗುತ್ತಾ ಮುಕ್ತಿ?
ನವದೆಹಲಿ: ಸಿಎಂ ಸಿದ್ದರಾಮಯ್ಯ ಇಂದು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವರನ್ನ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಅಗತ್ಯವಿರುವ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಬೇಡಿಕೆ ಸಲ್ಲಿಸಿದ್ದಾರೆ. ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಅಂದಹಾಗೆ ರಾಜ್ಯದಲ್ಲಿ ಹಲವು ಹೆದ್ದಾರಿ ಕಾಮಗಾರಿಗಳು ಹಾಗೂ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ. ಪ್ರಮುಖವಾಗಿ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಸಮಸ್ಯೆ ಬೆಳಕಿಗೆ ತರುವ ಮೂಲಕ ಗಮನ ಸೆಳೆದರು ಸಿಎಂ ಸಿದ್ದರಾಮಯ್ಯ. ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೆ ಚರ್ಚಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ಹೆದ್ದಾರಿ ವೀಕ್ಷಣೆಗೆ ಕಳುಹಿಸಿ, ಲೋಪದೋಷ ಸರಿಪಡಿಸುವುದಾಗಿ ಸಚಿವರಾದ ಗಡ್ಕರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಅಪಘಾತ ನಿಯಂತ್ರಣಕ್ಕೆ ಏನು ಕ್ರಮ?
ಅಷ್ಟಕ್ಕೂ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಅವಘಡಗಳ ಕುರಿತು ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಚರ್ಚೆಯಾಗುತ್ತಿದೆ. ಹೀಗೆ ಪದೇ ಪದೆ ಸಂಭವಿಸುತ್ತಿರುವ ಭೀಕರ ಅಪಘಾತ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಮನವಿ ಒಂದನ್ನ ಮಾಡಿದ್ದಾರೆ. ಅಪಘಾತದ ನಿಯಂತ್ರಣಕ್ಕೆ ಪ್ರವೇಶ ಹಾಗೂ ನಿರ್ಗಮನ ಬೈಪಾಸ್‌ಗಳನ್ನ ಒದಗಿಸಬೇಕು. ಜೊತೆಗೆ ರಸ್ತೆ ಬದಿ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಹಾಗೇ ಶಿರಾಡಿ ಘಾಟ್ ಮಾರನಹಳ್ಳಿಯಿಂದ ಅಡ್ಡಹೊಳೆ ವಿಭಾಗದ ನಡುವೆ ಸುರಂಗ ನಿರ್ಮಾಣ ಮಾಡಲು ಕೂಡ ಮನವಿ ಮಾಡಿದರು.
ಅನುದಾನ ಬಿಡುಗಡೆ ಮಾಡುವಂತೆ ಮನವಿ
ಅಲ್ಲದೆ ಈ ಸಂದರ್ಭದಲ್ಲಿ ಕರ್ನಾಟಕಕ್ಕೆ 10 ಸಾವಿರ ಕೋಟಿ ಮೊತ್ತದ ವಾರ್ಷಿಕ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ನೆರೆ ಹಾನಿ ದುರಸ್ತಿಗೆ 250 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೂಡ ಸಿಎಂ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ನಿರ್ವಹಣೆ ಹಾಗೂ ದುರಸ್ತಿ ಯೋಜನೆಯಡಿ ನೀಡುವ ಅನುದಾನ 50 ಕೋಟಿ ರೂಪಾಯಿ ಹೆಚ್ಚಿಸಲು ಕೋರಲಾಗಿದೆ. ಜೊತೆಯಲ್ಲೇ ರಾಜ್ಯ ರಸ್ತೆ & ಜಿಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ 2023 ಹಾಗೂ 2024ನೇ ಸಾಲಿನಲ್ಲಿ 1000 ಕೋಟಿ ರೂಪಾಯಿ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.

ಇದಿಷ್ಟರ ಜೊತೆಗೆ ಇನ್ನೂ ಅನೇಕ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಕೇಂದ್ರ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿದ್ದಾರೆ. ಆ ಪ್ರಕಾರ ಕೇರಳ ಹಾಗೂ ಕರ್ನಾಟಕ ಗಡಿಯನ್ನು ಗುಂಡ್ಲುಪೇಟೆಯಿಂದ ಕೊಳ್ಳೆಗಾಲಕ್ಕೆ ಸಂಪರ್ಕಿಸುವ NH 766 ರಸ್ತೆಯ 4/6 ಪಥದ ಅಗಲೀಕರಣ, ಮಳವಳ್ಳಿ ಮತ್ತು ಕೊಳ್ಳೆಗಾಲ ಮೂಲಕ ಕನಕಪುರದಿಂದ ತಮಿಳುನಾಡು ಗಡಿ ಸಂಪರ್ಕಿಸುವ NH 948 ರಸ್ತೆಯ 4ನೇ ಪಥ ಅಗಲೀಕರಣ ಕುರಿತಾಗಿಯೂ ಮನವಿ ಮಾಡಿದ್ದಾರೆ. ಒಟ್ನಲ್ಲಿ ರಾಜ್ಯದಿಂದ ಬೇಡಿಕೆ ಸಲ್ಲಿಕೆಯಾಗಿದ್ದು, ಕೇಂದ್ರ ಸರ್ಕಾರ ಯಾವ ಬೇಡಿಕೆಗೆ ಒಪ್ಪಲಿದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications