ಸಿದ್ದರಾಮಯ್ಯ ಅವರಿಂದ ನನ್ನ ಕುಟುಂಬ ಮುಗಿಸುವ ಪ್ರಯತ್ನ : ಸಂಸದ ಹೀಗೆ ಹೇಳಿದ್ಯಾಕೆ ?
ಮೈಸೂರು, ಜನವರಿ 01: ತಂದೆಗಾಗಿ ವರುಣ ಕ್ಷೇತ್ರವನ್ನು ಬಿಟ್ಟು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರಿಗಾಗಿ ನನ್ನ ಕುಟುಂಬವನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಅವರು ಸಿದ್ದರಾಮಯ್ಯ ಅವರ ವಿರುದ್ಧ ದೂರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನನ್ನ ತಮ್ಮ ತಲೆಮರೆಸಿಕೊಂಡಿದ್ದನಾ? ಎರಡು ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಏಫ್ ಐ ಆರ್ ಆಗಿಲ್ಲ. ಆತ ತಲೆಮರೆಸಿಕೊಂಡಿರಲಿಲ್ಲ. ಆದರೂ ಆತ ತಲೆಮರೆಸಿಕೊಂಡಿದ್ದ. ಹಾಗಾಗಿ ಬಂಧಿಸಿದ್ದೇವೆ ಎಂದು ಹೇಳುವ ಮೂಲಕ ಯಾಕೆ ದಾರಿ ತಪ್ಪಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು. ಅಲ್ಲದೇ ತಮ್ಮ ಮಗನನ್ನು ಎಂಪಿ ಚುನಾವಣೆಯಲ್ಲಿ ಗೆಲ್ಲಿಸಲು ಸಿದ್ದರಾಮಯ್ಯನವರು ಯಾರನ್ನು ಬೇಕಾದರೂ ತುಳಿಯುತ್ತಾರೆ. ತುಳಿಯುವುದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.
ಮರಗಳ ಕಳ್ಳತನದ ಆರೋಪದ ಮೇಲೆ ನನ್ನ ಸೋದರ ವಿಕ್ರಂ ಸಿಂಹನನ್ನು ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಅರೆಸ್ಟ್ ಮಾಡಲಾಗಿದ್ದರೂ ಇದುವರೆವಿಗೂ ಏಕೆ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರಂತಹ ತಂದೆ ಎಲ್ಲರಿಗೂ ಸಿಗಲ್ಲ. ನಿಜಕ್ಕೂ ನಿಮ್ಮನ್ನ ಮೆಚ್ಚಿದ್ದೇನೆ. ನಿಮ್ಮ ಕುಟುಂಬ ರಾಜಕಾರಣ ಮುಂದುವರಿಸಲು ನಾನು ಅಡ್ಡಿ ಆಗಿದ್ದೇನೆಂದು ನನ್ನನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣವೇ ಮುಂದುವರಿಯಲಿ. ನಿಮಗೆ ಬಹಳಷ್ಟು ದಾರಿಗಳಿಲ್ಲ. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡುವುದಿಲ್ಲ. ಮತ್ತು ಮೈಸೂರು-ಕೊಡಗು ಕ್ಷೇತ್ರದ ಜನರು ನಿಮ್ಮನ್ನು ಬಿಡುವುದಿಲ್ಲ ಎಂದು ಕಿಡಿಕಾರಿದರು.
ಡಿಸೆಂಬರ್ 16 ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆದು ತಂದಿದ್ದೀರಿ. ಮರ ಕಡಿದ ಪ್ರಕರಣದಲ್ಲಿ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಅವರನ್ನು ಸೆರೆಹಿಡಿಯಲು ಆಗಿಲ್ಲ. ಡಿಸೆಂಬರ್ 24 ರವರಗೆ ನೀವು ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದರೆ, ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಸಂದರ್ಭ ನಾನು ಒಂದು ಹೇಳಿಕೆ ನೀಡಿದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ ಎಂದು ಕಾಂಗ್ರೆಸ್‌ನವರು ಪೋಸ್ಟ್ ಹಾಕಿದ್ದಾರೆ. ಆದರೆ, ಎಫ್ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನು ಬಂಧಿಸುವ ಮೂಲಕ ಪ್ರತಾಪ್‌ಸಿಂಹನನ್ನು ಮುಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications