ಬಜೆಟ್ ಮಂಡಿಸಲು ಸಿಎಂ ಸಿದ್ಧತೆ, ಇಂದು ದಿನಪೂರ್ತಿ ಸಭೆ
ಬೆಂಗಳೂರು, ಜ.19 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯ ಸಿದ್ಧತೆ ಆರಂಭಿಸಿದ್ದಾರೆ. ಸೋಮವಾರದಿಂದ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ 2015-16ನೇ ಸಾಲಿನ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
ಸೋಮವಾರದ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಡೀ ದಿನ ಅವರು ವಿವಿಧ ಇಲಾಖೆಗಳ ಸಭೆ ನಡೆಲಿದ್ದು, ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ. ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಉನ್ನತಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. [ಕರ್ನಾಟಕ ಬಜೆಟ್ 2014-15 ಮುಖ್ಯಾಂಶ]

ಫೆಬ್ರವರಿ 2 ರಿಂದ 13 ರ ವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ಬಳಿಕ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಬಜೆಟ್ ಸಿದ್ಧತೆ ಸಂಬಂಧ ಜಂಟಿ ಅಧಿವೇಶನ ಆರಂಭಕ್ಕೆ ಮುನ್ನ ಹಾಗೂ ನಂತರ ಎಲ್ಲ ಇಲಾಖೆಗಳ ಸಭೆಯನ್ನು ಸಿಎಂ ನಡೆಸಲಿದ್ದಾರೆ.
ಸೋಮವಾರ ಇಡೀ ದಿನ ಈ ಉದ್ದೇಶಕ್ಕೆ ಸಮಯ ಮೀಸಲಿಡಲಾಗಿದ್ದು, ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ. ಈ ಸಭೆಗೂ ಮುನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ತೆರಿಗೆ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿಯ ಪ್ರಗತಿ ಪರಿಶೀಲನೆ ನಡೆಯಲಿದೆ.
ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಮುಖ್ಯಮಂತ್ರಿಯಾಗಿ 2 ಬಾರಿ ಸೇರಿದಂತೆ ಒಟ್ಟು 9 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು ಈ ಬಾರಿ 10ನೇ ಬಜೆಟ್ ಮಂಡಿಸಲಿದ್ದಾರೆ.












Click it and Unblock the Notifications