ಮುಡಾ ಕೇಸ್ ಬಗ್ಗೆ ಮಹತ್ವದ ಸಾಕ್ಷಿ ರಿಲೀಸ್ ಮಾಡಿದ ಸಿದ್ದರಾಮಯ್ಯ; ಏನಿರಬಹುದು?
ಬೆಂಗಳೂರು, ಆಗಸ್ಟ್ 26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಕೇಸ್ ಸಂಬಂಧ ಸಿಎಂ ಸಿದ್ದರಾಮಯ್ಯ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಕೇಸ್ ಸಂಬಂಧ ದಾಖಲೆಗಳನ್ನು ವೈಟ್ನರ್ ಮೂಲಕ ತಿರುಚಲಾಗಿದೆ ಎಂದು ಬಿಜೆಪಿಯವರು ಗಂಭೀರ ಆರೋಪ ಮಾಡಿದ್ದಕ್ಕೂ ತಿರುಗೇಟು ನೀಡಿದ್ದಾರೆ. ಮುಡಾ ಕೇಸ್ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ದಾಖಲೆಯೊಂದನ್ನು ರಿಲೀಸ್ ಮಾಡುವ ಮೂಲಕ ಸಮರ್ಥನೆಗೆ ಮುಂದಾಗಿದ್ದಾರೆ.
ಮುಡಾ ಕೇಸ್ ಬೆಳಕಿಗೆ ಬಂದ ನಂತರ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವೈಟ್ನರ್ ಹಾಕಿ ತಿರುಚಲಾಗಿದೆ. ಈ ಮೂಲಕ ಸಾಕ್ಷಿ ನಾಶದ ಯತ್ನ ನಡೆದಿದೆ ಎಂದು ಬಿಜೆಪಿಯವರು ಗಂಭೀರವಾದ ಆರೋಪ ಮಾಡಿದ್ದರು. ಅದರಂತೆ ವೈಟ್ನರ್ ಹಾಕಿದ್ದ ಪತ್ರವನ್ನೂ ಬಿಡುಗಡೆ ಮಾಡಿ ಇದಕ್ಕೆ ಉತ್ತರ ನೀಡುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಸಿದ್ದರಾಮಯ್ಯ ಅವರೂ ದಾಖಲೆಯೊಂದರ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿಯವರು ಆರೋಪ ಮಾಡಿದ್ದ ಅದೇ ದಾಖಲೆಯನ್ನು ಹಂಚಿಕೊಂಡು ಈ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲಿದ್ದ ವೈಟ್ನರ್ ಬಗ್ಗೆಯೂ ಕ್ಲಾರಿಟಿ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ʼಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ-ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದು ಟಾಂಗ್ ನೀಡಿದ್ದಾರೆ.
ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ,… pic.twitter.com/NMQfgViKNp
— Siddaramaiah (@siddaramaiah) August 26, 2024
ʼನನ್ನ ಪತ್ನಿ ಬದಲಿ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ "ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ" ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ʼವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್ ಹಚ್ಚಿ ಬಂದಿದ್ದಾರೆʼ ಎಂದೆಲ್ಲ ಬೊಬ್ಬೆ ಹಾಕುತ್ತಿದ್ದ ಸ್ವಯಂಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ ಎಂದು ಸಿದ್ದರಾಮಯ್ಯ ತಮ್ಮ ಮಾತಿನ ಮೂಲಕ ತಿವಿದಿದ್ದಾರೆ.
ʼಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ-ಜೆಡಿಎಸ್ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾಡಿದ್ದ ʼವೈಟ್ನರ್ʼ ಆರೋಪಗಳಿಗೆ ತೆರೆ ಎಳೆದಿದ್ದಾರೆ.












Click it and Unblock the Notifications