Valmiki Scam: ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಮಹತ್ವದ ಮಾಹಿತಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಆರೋಪಿಯಾಗಿದ್ದ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನಿನ್ನೆ ಜಾಮೀನು ಮಂಜೂರಾಗಿದೆ. ಈ ಬಗ್ಗೆ ಇಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 89.63 ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಪೂರ್ಣ ಮೊತ್ತವನ್ನೂ ಸಹ ಮರುಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಸಿದ್ದರಾಮಯ್ಯ ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ಆದರೂ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ ಯಾವುದೇ ಕಡಿತ ಮಾಡಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರದ ಹಿನ್ನಲೆಯಲ್ಲಿ ನಿಗಮಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುವುದು ಹಾಗೂ ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವ ಬಗ್ಗೆಯೂ ಇಂದಿನ ಸಭೆ ಗಮನ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89.63 ಕೋಟಿ ರೂ.ಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂ.ಗಳನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉಳಿದ 84.63 ಕೋಟಿ ರೂಪಾಯಿಗಳಲ್ಲಿ 71.54 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ. ಇನ್ನುಳಿದ ಸುಮಾರು 13 ಕೋಟಿಗಳ ಮೊತ್ತವನ್ನು ವಸೂಲಿ ಮಾಡಿಕೊಡುವುದಾಗಿ ಎಸ್‌ಐಟಿ ತಿಳಿಸಿದೆ. ಈ ರೀತಿ ಒಟ್ಟು ಅವ್ಯವಹಾರವಾಗಿದ್ದ ಪೂರ್ಣ ಮೊತ್ತವನ್ನು ಸಹ ಮರಳಿ ಪಡೆಯಲಾಗುತ್ತಿದೆ. ಈ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ಮುಂಬರುವ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಕೋರ್ಟ್‌ನಲ್ಲಿ ನಿನ್ನೆ ರಿಲೀಫ್ ಸಿಕ್ಕಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಬಿ.ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ನಾಗೇಂದ್ರ ಅವರಿಗೆ 2 ಲಕ್ಷ ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ ನೀಡಲು ಕೋರ್ಟ್ ಸೂಚಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ಬಂಧನವಾಗಿತ್ತು. ಈ ಆರೋಪದ ಮೇರೆಗೆ ಆಗ ಸಚಿವ ಸ್ಥಾನದಲ್ಲಿದ್ದ ಅವರು ರಾಜೀನಾಮೆ ನೀಡಿದ್ದರು. ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರ ಹೆಸರು ಕೇಳಿಬಂದಿತ್ತು.
ಬಳಿಕ ಇದಕ್ಕೆ ಸಂಬಂಧಿಸಿ ಸಾಕ್ಷಿಗಳು ಸಿಕ್ಕಿದ್ದರಿಂದ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇತ್ತೀಚೆಗೆ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು. ಇನ್ನು ನಿನ್ನೆ ಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ನಾಗೇಂದ್ರ ಅವರು ರಿಲೀಫ್ ಆಗಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications