Siddaramaiah: ಶಾಂತಿ, ಸಾಮರಸ್ಯ ಕದಡುವ ಕೆಲಸ ಮಾಡುವ ಸಂಘಟನೆಗಳ ಮೇಲೆ ಕಠಿಣ ಕ್ರಮ: ಸಿದ್ದರಾಮಯ್ಯ
ಬೆಂಗಳೂರು,ಮೇ 27: ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಕದಡುವ ಕೆಲಸ ಮಾಡುವ ಯಾವುದೇ ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಕುರಿತು ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 59 ನೇ ಪುಣ್ಯ ತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರ ನಿಷೇಧ ಮಾಡುವ ಬಗ್ಗೆ ಸರ್ಕಾರ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂದು ಅಥವಾ ನಾಳೆ ಖಾತೆಗಳ ಹಂಚಿಕೆ ಮಾಡಲಾಗುವುದು ಎಂದರು.

ಜವಾಹರಲಾಲ್ ನೆಹರೂ ಅವರು ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲನೇ ಪ್ರಧಾನಿಯಾಗಿ 17 ವರ್ಷಗಳ ಕಾಲ ಸ್ವತಂತ್ರ ಭಾರತವನ್ನು ಆಧುನಿಕಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿಯೇ ಆಧುನಿಕ ಭಾರತ ನಿರ್ಮಾತೃ ಎಂದು ಕರೆಯುತ್ತೇವೆ. ಬ್ರಿಟಿಷರು ದೇಶವನ್ನು ಲೂಟಿ ಮಾಡಿ ಬಿಟ್ಟು ಹೋಗಿದ್ದ ದೇಶವನ್ನು ಪ್ರಧಾನಿಗಳಾಗಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಂಡಿದ್ದರೆ, ಸಾರ್ವಭೌಮತ್ವ ಉಳಿದಿದ್ದರೆ ಅದಕ್ಕೆ ಜವಾಹರಲಾಲ್ ನೆಹರೂ ಅವರು ಕಾರಣ. ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದರು. ಅವರು ಹಾಕಿದ ಅಡಿಪಾಯದ ಮೇಲೆಯೇ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸುವ ಕೆಲಸವನ್ನು ಮಾಡುತ್ತೇವೆ. ಈ ದೇಶಕ್ಕೆ ಪ್ರಜಾಪ್ರಭುತ್ವ, ಅಭಿವೃದ್ಧಿ, ಆಧುನಿಕತೆಯ ಅಡಿಪಾಯ ಹಾಕಿದವರು ನೆಹರೂ.

ಸ್ವಾತಂತ್ರ್ಯ ಹೋರಾಟದಲ್ಲಿ , ಸುಭಾಶ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್ , ಜವಾಹರಲಾಲ್ ನೆಹರೂ, ಚಂದ್ರಶೇಖರ್ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳು ಮಹಾತ್ಮಗಾಂಧಿ ಅವರೊಂದಿಗೆ ಅಪಾರವಾಗಿ ತೊಡಗಿಸಿಕೊಂಡಿದ್ದರು. ನೆಹರು ಅವರು ಸುಮಾರು ಒಂಭತ್ತು ವರ್ಷಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು. ದೇಶದ ಸ್ವಾತಂತ್ರ್ಯ, ಅಭಿವೃದ್ಧಿಗಾಗಿ ಅಪಾರ ತ್ಯಾಗ, ಬಲಿದಾನಗಳನ್ನು ಮಾಡಿದ ಕುಟುಂಬ ಅವರದ್ದು ಎಂದು ತಿಳಿಸಿದರು.
ಈಗ ಟೀಕೆಗಳನ್ನು ಮಾಡುತ್ತಾರೆ ಆದರೆ ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕು. ಅದು ನಮ್ಮೆಲರಿಗೂ ಸ್ಫೂರ್ತಿ. ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆಯಂದು ಅವರನ್ನು ಸ್ಮರಿಸುತ್ತಿದ್ದೇವೆ ಎಂದರು.












Click it and Unblock the Notifications