ಕೈಗಡಿಯಾರದ ರಾದ್ಧಾಂತ, ಕಡೆಗೂ ಬಾಯ್ಬಿಟ್ಟ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 25 : ತಮ್ಮ ಕೈಯಲ್ಲಿದ್ದ ಹ್ಯೂಬ್ಲೋಟ್‌ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಬಾಳುವ ವಾಚ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಮೌನ ಮುರಿದಿದ್ದಾರೆ. 'ಕೇರಳ ಮೂಲದ ಸ್ನೇಹಿತರೊಬ್ಬರು ವಾಚ್ ಉಡುಗೊರೆಯಾಗಿ ನೀಡಿದರು' ಎಂದು ಅವರು ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, '2015ರ ಜುಲೈನಿಂದ ಈ ವಾಚು ನನ್ನ ಬಳಿ ಇದೆ. ದುಬೈನಲ್ಲಿ ನೆಲೆಸಿರುವ ನನ್ನ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಅವರು ಈ ವಾಚ್‌ಅನ್ನು ನನಗೆ ಉಡುಗೊರೆಯಾಗಿ ನೀಡಿದರು' ಎಂದು ಹೇಳಿದರು. [ಹ್ಯೂಬ್ಲೋಟ್ ವಾಚು ಹರಾಜು ಹಾಕಲು ಸಿದ್ಧರಾದ ಸಿದ್ದರಾಮಯ್ಯ!]

siddaramaiah

'1983ರಿಂದ ಡಾ.ಗಿರೀಶ್ ಚಂದ್ರ ವರ್ಮಾ ಅವರು ನನ್ನ ಸ್ನೇಹಿತರು. ಜುಲೈನಲ್ಲಿ ಬೆಂಗಳೂರಿಗೆ ಬಂದಾಗ ಒತ್ತಾಯಪೂರ್ವಕವಾಗಿ ತಮ್ಮ ಕೈಯಲ್ಲಿದ್ದ ವಾಚ್‌ ಅನ್ನು ಅವರು ಬಿಚ್ಚಿ ಕೊಟ್ಟಿದ್ದರು. ಸ್ನೇಹಿತ ಕೊಟ್ಟ ಮೇಲೆ ಬೇಡ ಅನ್ನಲಾಗದೆ ಅದನ್ನು ತೆಗೆದುಕೊಂಡೆ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]

ಸಿದ್ದರಾಮಯ್ಯ ಹೇಳಿದ್ದಿಷ್ಟು....

* ವಾಚ್ ಉಡುಗೊರೆಯಾಗಿ ನೀಡಿದ್ದ ನನ್ನ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ. ಅವರು ಕೇರಳ ಮೂಲದವರು. ಅವರ ಪೂರ್ಣ ಹೆಸರು ಗೋಪಾಲ ಪಿಳ್ಳೈ ಡಾ.ಗಿರೀಶ್ ಚಂದ್ರ ಮರ್ಮ. ಸದ್ಯ ಅವರು ದುಬೈನಲ್ಲಿ ನೆಲೆಸಿದ್ದಾರೆ.

* ಅವರು ದಾವಣಗೆರೆ ಮತ್ತು ಮಂಗಳೂರಿನಲ್ಲಿ ಓದಿದವರು. 1983ರಿಂದ ನನಗೆ ಸ್ನೇಹಿತರು. ಆಗಾಗ ಕರ್ನಾಟಕ್ಕೆ ಬರುತ್ತಿರುತ್ತಾರೆ. 2015ರ ಜುಲೈನಲ್ಲಿ ಬಂದಾಗ ತಮ್ಮ ಕೈಯಲ್ಲಿದ್ದ ವಾಚ್‌ ಅನ್ನು ಒತ್ತಾಯಪೂರ್ವಕವಾಗಿ ನನಗೆ ನೀಡಿದ್ದರು.

* ಸ್ನೇಹಿತ ಒತ್ತಾಯ ಪೂರ್ವಕವಾಗಿ ಕೊಟ್ಟ ಮೇಲೆ ಬೇಡ ಎನ್ನಬಾರದು ಎಂದು ಅದನ್ನು ತೆಗೆದುಕೊಂಡೆ ನವೆಂಬರ್‌ನಿಂದ ಅದನ್ನು ಕಟ್ಟುತ್ತಿದ್ದೆ. ಈ ವಾಚ್ ನನ್ನ ಕೈ ಸೇರಿದ್ದು, 2015ರಲ್ಲಿ ಅಲ್ಲಿಯ ತನಕ ಅದು ನನ್ನ ಬಳಿ ಇರಲಿಲ್ಲ.

* ಸಮಾಜವಾದಿ ಸಿದ್ದರಾಮಯ್ಯ ಅವರು ಮಜಾವಾದಿಯಾದರು ಎಂದೆಲ್ಲಾ ಟೀಕೆಗಳನ್ನು ಮಾಡುವುದು ಬೇಡ. ನಾನು ಮತ್ತು ನನ್ನ ಕುಟುಂಬದವರು ಎಂದೂ ಮೋಜಿನ ಜೀವನವನ್ನು ನಡೆಸಿದವರಲ್ಲ.

ವಾಚ್ ವಿವಾದದ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ನಿಂತಿದ್ದ ಸಚಿವ ಎಸ್.ಆರ್.ಪಾಟೀಲ್ ಅವರು 'ಸಿದ್ದರಾಮಯ್ಯ ಅವರು ವಾಚ್ ವಿವಾದದಲ್ಲಿ ಜನ ಮೆಚ್ಚುವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ' ಎಂದು ಹೇಳಿದ್ದರು.

ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ವಾಚ್ ಬಗ್ಗೆ ಮೊದಲು ವಿಷಯ ಪ್ರಸ್ತಾಪಿಸಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡಿ ಎಂದು ಸಲಹೆಯನ್ನು ನೀಡಿದ್ದರು.

ಪ್ರತಿಪಕ್ಷ ಬಿಜೆಪಿ ವಾಚ್ ಹಗರಣದ ಬಗ್ಗೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ವಾಚ್ ವಿವಾದ ಕೆದಕಿದ ಕುಮಾರಸ್ವಾಮಿ ಅವರ ವಿರುದ್ಧ ತಿರುಗಿಬಿದ್ದಿರುವ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಮುಂತಾದವರು, ಕುಮಾರಸ್ವಾಮಿ ಅವರ ದುಬಾರಿ ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. [ಕುಮಾರಸ್ವಾಮಿ ದುಬಾರಿ ಕಾರುಗಳ ಪಟ್ಟಿ]

ರಾಜ್ಯಾದ್ಯಂತ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಿದ್ದ ವಾಚ್ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ ಅವರು ಸ್ಪಷ್ಟನೆಗಳನ್ನು ನೀಡಿದ್ದಾರೆ. ವಾಚ್ ವಿವಾದದ ಕೆಸರೆರಚಾಟದಲ್ಲಿ ಮನರಂಜನೆ ಸಿಕ್ಕಿದ್ದು ಮಾತ್ರ ರಾಜ್ಯದ ಜನರಿಗೆ. ವಾಚ್ ವಿವಾದ ಮುಂದೆ ಎತ್ತ ಸಾಗುತ್ತದೆ? ಕಾದು ನೋಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah on Thursday finally broke his silence about Hublot watch issue worth of Rs 70 lakh.
Please Wait while comments are loading...