2,992 ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗುಡ್‌ನ್ಯೂಸ್
ಸಿಎಂ ಸಿದ್ದರಾಮಯ್ಯ ಅವರು 2,992 ಖಾಲಿ ಹುದ್ದೆಗಳ ನೇಮಕಾತಿ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಇಂದು ಗೃಹಕಚೇರಿ ಕೃಷ್ಣಾದಲ್ಲಿ ನಡೆದ ವಿವಿಧ ಪೌರ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಸೇರಿದಂತೆ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯೂ ನೀಡಿದ್ದಾರೆ.
ಹುದ್ದೆಗಳ ಭರ್ತಿ ಸಂಬಂಧ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿದ್ದ ಪೌರ ಕಾರ್ಮಿಕರ 2,992 ಹುದ್ದೆಗಳ ಪೈಕಿ 492 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದ್ದು, ಇನ್ನುಳಿದ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದಿದ್ದಾರೆ.

ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ
ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಪೌರಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ನೇರ ವೇತನದಡಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮೃತಪಟ್ಟ ಪೌರ ಕಾರ್ಮಿಕರ ಅವಲಂಬಿತರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ಸಂಪನ್ಮೂಲದಿಂದ ಭರಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ಕಾರ್ಮಿಕ ದಿನಾಚರಣೆಯಂದೇ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಬಸವಣ್ಣನವರ ಮಾತಿನಂತೆ ಪೌರ ಕಾರ್ಮಿಕರು ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರ ಕೆಲಸಕ್ಕೆ ಇತರರು ಬರುವುದು ವಿರಳ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು.
ಇಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವೆಗಳಿಗೂ ಅದರದ್ದೇ ಆದ ಗೌರವ ಇದೆ. ಪೌರಕಾರ್ಮಿಕರನ್ನ ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ಎಲ್ಲರಿಗೂ ವೃತ್ತಿ ಗೌರವ, ಘನತೆ ಸಿಗಬೇಕು. ಈ ಕಾರಣದಿಂದಲೇ ಸೇವೆ ಕಾಯಂ ಮಾಡಲಾಗುವುದು. ಗುತ್ತಿಗೆಯಿಂದ ತೆಗೆದು ಚಾಲಕರ ಸೇವೆಯನ್ನು ಕೂಡ ಕಾಯಂ ಮಾಡಲಾಗುವುದು ಎಂದು ಸಿಎಂ ಹೇಳಿದ್ದರು. ಇದೀಗ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸಿದ್ದರಾಮಯ್ಯ ಅಪ್‌ಡೇಟ್ ನೀಡಿದ್ದಾರೆ.
ಗಣೇಶ ಮೆರವಣಿಗೆ ಅವಘಡ; ಮೃತರಿಗೆ 5 ಲಕ್ಷ ಪರಿಹಾರ
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿದ್ದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ, ಪರಿಹಾರ ಘೋಷಿಸಿದ್ದಾರೆ. ಈ ಅವಘಡದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.












Click it and Unblock the Notifications