'ನಾನು ಹೋದರೆ ಹೋದೇನು': ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ
CM Siddaramaiah: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡಂತಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಒಗ್ಗಟ್ಟಿನ ಸಂದೇಶ ರವಾನೆಯಾದರೂ ಸಹಿತ ಈ ಚರ್ಚೆ ಮುಂದುವರಿದಿದೆ. ಇದೀಗ ಐದು ವರ್ಷ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಕುರಿತು ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು. ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ಇರಬೇಕೆಂದು ಜನರು ನಮಗೆ ಆಶೀರ್ವಾದ ಮಾಡಿ ಕಳಿಸಿದ್ದಾರೆ. 140 ಶಾಸಕರು ನಮ್ಮೊಂದಿಗಿದ್ದಾರೆ. ವಿರೋಧ ಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

2023 ರಲ್ಲಿ ಜನರು ಆಶೀರ್ವಾದ ಮಾಡಿದಂತೆ 2028 ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬರಲಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಬಹುಮತದ ಮೂಲಕ ಅಧಿಕಾರಕ್ಕೆ ತರುವುದಿಲ್ಲ ಎಂದು ಭವಿಷ್ಯ ನುಡಿದರು. ಜನರ ನಾಡಿಮಿಡಿತ ನಮ್ಮ ಸರ್ಕಾರಕ್ಕೆ ತಿಳಿದಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ.
ರಾಜ್ಯದಲ್ಲಿ 2008, 2018 ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಸರ್ಕಾರ ರಚಿಸಲಾಯಿತು. ಆದರೆ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.
'ನಾನು' ಹೋದರೆ ಹೋದೇನು': ಸಿದ್ದರಾಮಯ್ಯ
ಕಾಂಗ್ರೆಸ್‌ನಲ್ಲಿ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮವಾಗಿರುತ್ತದೆ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ. ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಹಾಗೂ ಮತ್ತೆ ಚುನಾವಣೆ ಎದುರಿಸಿ 2028 ರಲ್ಲಿಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. 2013 ಮತ್ತು 2023ರಲ್ಲಿಯೂ ನಮಗೆ ಜನರು ಆಶೀರ್ವಾದ ಮಾಡಿದ್ದಾರೆ, ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ ಹಾಗೂ ಭವಿಷ್ಯದಲ್ಲಿಯೂ ದೊರೆಯುವುದಿಲ್ಲ.
ಬಿಜೆಪಿ ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದೆ. 'ನಾನು ಹೋದರೆ ಹೋದೇನು' ಅಂತ ಕನಕದಾಸರು ಹೇಳಿದ್ದರು. 'ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ'. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಸಿಎಂ ಸ್ಥಾನ ಹೈಕಮಾಂಡ್ ಬದಲಾಯಿಸಿದರೆ ಮಾತ್ರವೇ ಬದಲಾಗುತ್ತದೆ. ಇಲ್ಲವಾದರೆ ಐದು ವರ್ಷ ಅವರೇ ಸಿಎಂ ಆಗಿರಲಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದೆಲ್ಲ ಬೆಳವಣಿಗೆ ಹಾಗೂ ಅಧಿವೇಶನ ಮುಗಿದ ಬಳಿಕ ದೆಹಲಿ ವರಿಷ್ಠರ ಭೇಟಿ, ಎರಡು ಬಣಗಳ ಶಾಸಕರು, ಸಚಿವರು ತೆರೆಮರೆಯ ಕಸರತ್ತು ನಡೆಸುವುದು ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications