ಸಿಎಂ ಪರಿಹಾರ ನಿಧಿ ನಿಯಮ ಬದಲಾವಣೆ: ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 10: ಸಿಎಂ ಪರಿಹಾರ ನಿಧಿಯಿಂದ ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಪರಿಹಾರ ವಿತರಿಸಲು ಅನುಸರಿಬೇಕಿರುವ ಕ್ರಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಶಾಸಕರು ಸಂಸದರು ಸಿಎಂ ಪರಿಹಾರ ನಿಧಿಗೆ ತಮ್ಮ ಕ್ಷೇತ್ರ ಬಿಟ್ಟು ಅನ್ಯ ಕ್ಷೇತ್ರದವರನ್ನ ಶಿಫಾರಸ್ಸು ಮಾಡಿದ್ರೆ ಅದನ್ನ ಸಾಮನ್ಯ ಅರ್ಜಿ ಎಂದು ಪರಿಗಣಿಸಲು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ನೀಡಿದೆ.
ಹೌದು, ಬಡರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಕೋರಿ ಶಾಸಕರು ಮತ್ತು ಸಂಸದರು ಶಿಫಾರಸ್ಸುಗಳ ಪೈಕಿ ಅವರ ಕ್ಷೇತ್ರವನ್ನು ಒಳಗೊಂಡು ಅವರ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳನ್ನ ಆದ್ಯತೆ ಮೇರೆಗೆ ಪರಿಗಣಿಸುವಂತೆ ಅಧಿಕಾರಿಗಳಿಗೆ ಸಿಎಂ ಕಚೇರಿಯಿಂದ ಸೂಚನೆ ನೀಡಲಾಗಿದೆ. ಅಲ್ಲದೇ ಅನ್ಯ( ಬೇರೆ) ಕ್ಷೇತ್ರದವರಿಗೆ ಶಿಫಾರಸ್ಸು ಮಾಡಿದ್ದಲ್ಲಿ ಅರ್ಜಿಗಳ ಸಮಾನ್ಯ ಪ್ರಕರಣ ಎಂದು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ಶಾಸಕರು, ಸಂಸದರು ಮಾಡುವ ಶಿಫಾರಸು ಕ್ಷೇತ್ರ ವ್ಯಾಪ್ತಿಯದ್ದಾಗಿದ್ದರೆ ಮಾತ್ರ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಈಗ ಕ್ಷೇತ್ರ, ಜಿಲ್ಲಾ ವ್ಯಾಪ್ತಿ ವಿಳಾಸದಾರರಿಗೆ ಶಿಫಾರಸು ಮಾಡಿದ್ದಲ್ಲಿ ಅರ್ಜಿಗಳನ್ನು ಸಾಮಾನ್ಯ ಪ್ರಕರಣ ಎಂದು ಪರಿಗಣಿಸಲಾಗುವುದು ನಿಯಮಾನಸಾರ ಪರಿಹಾರ ಮೊತ್ತ ಬಿಡುಗಡೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ನಿರ್ದೇಶನದಂತೆ ತಿದ್ದುಪಡಿ ಮಾಡಲಾಗಿದ್ದು, ಶಾಸಕರು, ಸಂಸದರ ಶಿಫಾರಸುಗಳಲ್ಲಿ ಅವರ ಜಿಲ್ಲಾ ವ್ಯಾಪ್ತಿಯ ವಿಳಾಸದಾರರನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಅವರ ಜಿಲ್ಲಾ ವ್ಯಾಪ್ತಿ ಹೊರತುಪಡಿಸಿ ಬೇರೆ ಜಿಲ್ಲೆ ವಿಳಾಸದಾರರಿಗೆ ಶಿಫಾರಸು ಮಾಡಿದ್ದಲ್ಲಿ ಅಂತಹ ಅರ್ಜಿಗಳನ್ನು ನಿಯಮಾನಸಾರ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಾರ್ಯದರ್ಶಿ ಡಾ.ಕೆ.ಎ ತ್ರಿಲೋಕ್ ಚಂದ್ರ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳು ಪರಿಹಾರ ಮಂಜೂರು ಮಾಡುವ ಸಂದರ್ಭದಲ್ಲಿ ಅರ್ಜಿ ಅಥವಾ ಶಿಫಾರಸ್ಸು ಪತ್ರದ ಮೇಲೆ ನಮೂದಿಸಲಾಗಿರುವ ಚಿಕಿತ್ಸಾ ವೆಚ್ಚವನ್ನು ಪರಿಗಣಿಸಿ ಪರಿಹಾರ ಮಂಜೂರು ಮಾಡುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಶಾಸಕರು, ಸಂಸದರು ಹಾಗೂ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸುತ್ತಿರುವ ಶಿಫಾರಸ್ಸು ಪತ್ರದಲ್ಲಿ ಅಥವಾ ಅರ್ಜಿಯಲ್ಲಿ ನಮೂದಿಸುತ್ತಿರುವ ಚಿಕಿತ್ಸಾ ವೆಚ್ಚದ ಮೊತ್ತದಂತೆ ಅರ್ಜಿಯೊಂದಿಗೆ ಲಗತ್ತಿಸಿರುವ ಬಿಲ್ಲುಗಳು ಲಭ್ಯವಿಲ್ಲದೆ ಇರುವುದು ಕಂಡುಬಂದಿರುತ್ತವೆ. ಆದ್ದರಿಂದ ಶಿಫಾರಸ್ಸು ಪತ್ರ ಅಥವಾ ಅರ್ಜಿಯಲ್ಲಿ ನಮೂದಿಸಿರುವ ಒಟ್ಟು ಚಿಕಿತ್ಸಾ ವೆಚ್ಚದಂತೆ ಆಸ್ಪತ್ರೆಯ ಬಿಲ್ಲುಗಳು ಲಭ್ಯವಿಲ್ಲದ ಪಕ್ಷದಲ್ಲಿ ಅಂತಹ ಪ್ರಕರಣಗಳಿಗೆ ಅನುಪಾತದಂತೆ ಲೆಕ್ಕ ಮಾಡಿ ನಿಯಮಾನುಸಾರ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡುವುದು.












Click it and Unblock the Notifications