CM Office: ಸಿಎಂ ಕಚೇರಿಯಿಂದ ಮೊಬೈಲ್ ನಂಬರ ದುರ್ಬಳಕೆ ಆರೋಪ: ಪತ್ರಕರ್ತನ ಹಾಸ್ಯಭರಿತ ಬಹಿರಂಗ ಮನವಿ ವೈರಲ್
CM Office: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪತ್ರಕರ್ತರೊಬ್ಬರ ಮೊಬೈಲ್ ಸಂಖ್ಯೆಯ ಪುನರಾವರ್ತಿತ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಧಾರವಾಡದ ಬೇಳೂರು ಸುದರ್ಶನ ಎನ್ನುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ನನ್ನ ಮೊಬೈಲ್ ಸಂಖ್ಯೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಮಾನ್ಯ ಮುಖ್ಯಮಂತ್ರಿಯವರ ಕಚೇರಿಯಿಂದ ನನ್ನ ಮೊಬೈಲ್ ಸಂಖ್ಯೆಯ ಪುನರಾವರ್ತಿತ ದುರ್ಬಳಕೆ ವಿರುದ್ಧ ಬಹಿರಂಗ ಮನವಿ ಎನ್ನುವ ಶೀರ್ಷಿಕೆಯಡಿಯಲ್ಲಿ ಅವರು ಬರಹವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಮಸ್ಕಾರಗಳು, ಈ ಹಿಂದೆ 2023ರಲ್ಲಿ ತಾವು ಮುಖ್ಯಮಂತ್ರಿಯಾದ ಹೊಸತರಲ್ಲಿ ನನ್ನ ಮೊಬೈಲ್ ನಂಬರನ್ನು ನಿಮ್ಮ ಹಿರಿಯ ಅಧಿಕಾರಿಯೊಬ್ಬರ (ಜಂಟಿ ಕಾರ್ಯದರ್ಶಿ ಅನ್ಸುತ್ತೆ) ದೂರವಾಣಿ ಸಂಖ್ಯೆ ಎಂದು ತಪ್ಪಾಗಿ ಮಾಹಿತಿ ನೀಡಿ ನನಗೆ ನೂರಾರು ಕರೆಗಳು ಬಂದು ಭಾರೀ ಸಮಸ್ಯೆಯಾಗಿತ್ತು. ಆಗ ನೀವು ನನ್ನನ್ನು ಜಂಟಿ ಕಾರ್ಯದರ್ಶಿ ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಅದೇನೂ ಆಗಲಿಲ್ಲ.

ಈಗ, ಎರಡು ವರ್ಷಗಳ ನಂತರ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರ ಹೆಸರಿನ ಮುಂದೆ ಮತ್ತೆ ನನ್ನ ಮೊಬೈಲ್ ನಂಬರನ್ನು ನಿಮ್ಮ ಕಚೇರಿಯಿಂದ ನಮೂದಿಸಲಾಗಿದೆ. ನಿನ್ನೆಯಿಂದ ನನಗೆ ವಾಟ್ಸಪ್ ಸಂದೇಶಗಳು, ಕರೆಗಳು ಬರಲಾರಂಭಿಸಿವೆ. ಒಂದೋ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ಈ ಲೋಪದ ಬಗ್ಗೆ ಗಮನಕ್ಕೆ ತಂದು ನನ್ನ ನಂಬರನ್ನು ತೆಗೆದುಹಾಕಿ. ಇಲ್ಲವೇ ಕೂಡಲೇ ನನ್ನನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡಿ ಎಂದು ಅವರು ತಮಾಷೆ ಮಾಡಿದ್ದಾರೆ.
ಮುಂದುವರಿದು ಜೋಕುಗಳು ಅತ್ತಾಗಿರ್ಲಿ, ದಯವಿಟ್ಟು ಈ ರೀತಿ ನನಗೆ ಹಿಂಸೆ ಕೊಡಬೇಡಿ. ಈ ಬಾರಿ ಕರೆಗಳು ಹೆಚ್ಚಾದರೆ ನಾನು ಅನಿವಾರ್ಯವಾಗಿ ಸೂಕ್ತ ಮತ್ತು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇಂತಿ ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವ ಮೊಬೈಲ್ ಶೋಷಿತ - ಬೇಳೂರು ಸುದರ್ಶನ
(ನನಗೆ ನಿನ್ನೆ ಬಂದ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟನ್ನೂ ಹಾಕಿದ್ದೇನೆ. ಅದರಲ್ಲಿ ನೀವು ಯಾವುದೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಂಡುಬರುತ್ತದೆ.) ಎನ್ನುವ ಸಂದೇಶವನ್ನು ಬೇಳೂರು ಸುದರ್ಶನ ಅವರು ತಮ್ಮ ಸೋಷಿಯಲ್ ಮೀಡಿಯಾ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಇನ್ನು ನೆಟ್ಟಿಗರು ಸಹ ಈ ವಿಷಯಕ್ಕೆ ಹಾಸ್ಯ ಮಾದರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮಿ ಪೊನ್ನಾಚಿ ಎನ್ನುವವರು, ಒಳ್ಳೇ ಮಜಾ ಐತೆ.. ದುಡ್ಡು ಕಾಸು ಮಾಡ್ಕೊಳ್ಳಿ ಸಾ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಶೋಕ್ ಟಿ.ಹೆಗಡೆ ಎನ್ನುವವರು ಕೂಡಲೇ ಹುದ್ದೆಯನ್ನು ಸ್ವಯಂ ಗ್ರಹಣ ಮಾಡಿ ಒಂದಿಷ್ಟು ತುಘಲಕ್ ಆದೇಶಗಳನ್ನು ಅದೇ ನಂಬರಿಂದ ಬಜಾಯಿಸಿ! ಸರ್ಕಾರಿ ವಿಧಾನ ತಮಗೆ ಹೊಸತಲ್ಲ. ಅವರೇ ಹುಡುಕಿಕೊಂಡು ಬಂದು ಸೂಕ್ತ ರಿಪೇರಿ ಮಾಡಬೇಕು ಎಂದಿದ್ದಾರೆ. ರವಿ ಜಾನೇಕಲ್ ಎನ್ನುವವರು ಹೌದು ಸರ್ ಎರಡಲ್ಲಿ ಒಂದು ಆಗಬೇಕು. ವಾಸ್ತವವಾಗಿ ಅಧಿಕಾರಿಗಳಿಗೆ ತಮ್ಮದೇ ಇಲಾಖೆ ವೆಬ್‌ಸೈಟ್ ಬಗ್ಗೆ ಅಷ್ಟು ನಿರ್ಲಕ್ಷ್ಯ ಅದನ್ನ ಯಾರೋ ಗೊತ್ತಿಲ್ಲದ ಗುತ್ತಿಗೆ ನೌಕರ ಹ್ಯಾಂಡಲ್ ಮಾಡುತ್ತಿರುತ್ತಾನೆ. ಪ್ರತಿಯೊಂದು ಇಲಾಖೆ ಜಾಲತಾಣ ಏನೋ ಒಂದು ಸಮಸ್ಯೆ ಎಂದಿದ್ದಾರೆ.












Click it and Unblock the Notifications